ಬುಧವಾರ, ಆಗಸ್ಟ್ 17, 2022
27 °C
ದಿಢೀರ್‌ ಸ್ಥಳ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡ

ಒತ್ತುವರಿಯಾದ ಜಾಗ ಮರುವಶಕ್ಕೆ ಜಿಲ್ಲಾಡಳಿತ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರ ಜಿಲ್ಲೆಯ ದಕ್ಷಿಣ ಉಪ ವಿಭಾಗದ ಕೋಣನಕುಂಟೆ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿದ್ದಲ್ಲದೇ, ಬಾಡಿಗೆಗೂ ನೀಡಿದ್ದಾರೆ. ಈ ಒತ್ತುವರಿ ತೆರವುಗೊಳಿಸಿ ಜಾಗವನ್ನು ಮತ್ತೆ ವಶಕ್ಕೆ ಪಡೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಬುಧವಾರ ಬೆಳಿಗ್ಗೆ ಸ್ಥಳಕ್ಕೆ ದಿಢೀರ್‌ ಭೇಟಿ ನೀಡಿದ ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ದಕ್ಷಿಣ ವಲಯ ಉಪವಿಭಾಗಾಧಿಕಾರಿ ಎಂ.ಜಿ.ಶಿವಣ್ಣ, ತಹಶೀಲ್ದಾರ್ ಶಿವಪ್ಪ ಲಮಾಣಿ ಮತ್ತಿತರ ಅಧಿಕಾರಿಗಳನ್ನು ಒಳಗೊಂಡ ತಂಡ ಒತ್ತುವರಿಯನ್ನು ಪರಿಶೀಲನೆ ನಡೆಸಿತು.

ದೊಡ್ಡ ಕಲ್ಲಸಂದ್ರ ಗ್ರಾಮದ ಜಾಗದಲ್ಲಿ ಭೂಮಾಲೀಕರು ಹಾಗೂ ಗೇಣಿದಾರರ ನಡುವೆ ವ್ಯಾಜ್ಯವಿತ್ತು. ಈ ನಡುವೆ ಸರ್ವೆ ನಂಬರ್‌ 12, 18, 20, 21ಗಳಲ್ಲಿ ಬ್ಯಾಂಕ್ ನೌಕರರ ಗೃಹನಿರ್ಮಾಣ ಸಹಕಾರ ಸಂಘವನ್ನು ರಚಿಸಿಕೊಂಡು ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಭೂಕಬಳಿಕೆ ಮಾಡುವ ಯತ್ನ ನಡೆದಿತ್ತು. ಈ ಹಿಂದಿನ ಉಪವಿಭಾಗಾಧಿಕಾರಿ ಎಲ್‌ಸಿ.ನಾಗರಾಜ್‌ ಅವರು ಈ ಭೂ ವ್ಯಾಜ್ಯದ ಕುರಿತು ವಿಚಾರಣೆ ನಡೆಸಿದ್ದರು. ಈ ಸಂಘವು ಕಾನೂನುಬದ್ಧವಾಗಿ ರೂಪುಗೊಂಡಿಲ್ಲ ಎಂಬ ಕಾರಣಕ್ಕೆ ಅಷ್ಟೂ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಂಡಿದ್ದರು.

ಆಗಿನ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಈ ಭೂಮಿಯನ್ನು ಸರ್ಕಾರದ ಹೆಸರಿಗೆ ಖಾತೆ ಮಾಡಿಸಿದ್ದರು. ಅದಾಗಲೇ ಮನೆಗಳಿದ್ದ ಜಾಗವನ್ನು ಹೊರತುಪಡಿಸಿ ಉಳಿದ ಖಾಲಿ ಜಾಗಗಳಿಗೆ ಕಂದಾಯ ಇಲಾಖೆ ವತಿಯಿಂದ ಬೇಲಿ ಹಾಕಲಾಗಿತ್ತು. ಸ್ಥಳದಲ್ಲಿ ‘ಇದು ಸರ್ಕಾರಿ ಜಾಗ’ ಎಂಬ ಸೂಚನಾ ಫಲಕವನ್ನೂ ಅಳವಡಿಸಲಾಗಿತ್ತು. ಈ ಬೇಲಿಯನ್ನು ತೆಗೆದು ಅದೇ ಜಾಗದಲ್ಲಿ ಮತ್ತೆ ಕಟ್ಟಡ ನಿರ್ಮಿಸಲಾಗಿದೆ. ಕೆಲವೆಡೆ ಜಾಗ ಸಮತಟ್ಟುಗೊಳಿಸಿ ನಿವೇಶನ ರಚಿಸಲು ಸಿದ್ಧತೆ ನಡೆದಿತ್ತು. ಈಗಾಗಲೇ ಅಕ್ರಮವಾಗಿ ಕೆಲವು ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿರುವುದೂ ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಕಂಡು ಬಂತು. ಈ ಜಾಗದಲ್ಲಿ ಕೆರೆ ಅಂಗಳ, ಮೀಸಲು ಪ್ರದೇಶ, ಕುಂಟೆ, ರಾಜಕಾಲುವೆಗಳ ಜಮೀನುಗಳೂ ಸೇರಿವೆ. 

-0-

ಎಫ್‌ಐಆರ್‌ ದಾಖಲಿಸಲು ಡಿ.ಸಿ ಸೂಚನೆ  

ಒತ್ತುವರಿಯನ್ನು ಗುರುತಿಸಲು ವಾರದೊಳಗೆ ಸರ್ವೆ ನಡೆಸಿ ವರದಿ ನೀಡಬೇಕು. ಜಾಗ ಒತ್ತುವರಿ ಮಾಡಿದವರನ್ನು ಪತ್ತೆ ಹಚ್ಚಬೇಕು. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ಉಪ ವಿಭಾಗಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸೂಚನೆ ನೀಡಿದರು. 

ಕಣ್ಣಮುಂದಿರುವ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟುತ್ತಿದ್ದರೂ ಮೇಲಿನ ಅಧಿಕಾರಿಗಳ ಗಮನಕ್ಕೆ ತಾರದ ಬಗ್ಗೆ ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.

‘ಇಂತಹ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಸರ್ವೆ ನಡೆಸಲು ಭೂಮಾಪನ ಇಲಾಖೆಯ ಅಧಿಕಾರಿಗಳು 15 ದಿನ ಕಾಲಾವಕಾಶ ಕೇಳಿದ್ದು, ಜಿಲ್ಲಾಧಿಕಾರಿಯವರನ್ನು ಮತ್ತಷ್ಟು ಕೆರಳಿಸಿತು.

‘ಅಕ್ರಮವಾಗಿ ಮನೆ ನಿರ್ಮಿಸಿರುವವರು ಅಷ್ಟೊತ್ತಿಗೆ ಗೃಹಪ್ರವೇಶ ಮುಗಿಸಿ ಸಂಸಾರ ಶುರು ಮಾಡಿರುತ್ತಾರೆ. ಬಳಿಕ ಹೊಸಮನೆ ನೋಡಿ ವಾಪಸ್ ಹೋಗಬೇಕಾ’ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ‘ನಿಮ್ಮ ಬಳಿ ಅತ್ಯಾಧುನಿಕ ಉಪಕರಣಗಳಿವೆ. ನುರಿತ ಸಿಬ್ಬಂದಿ ಇದ್ದಾರೆ. ನೆವ ಹೇಳದೇ ಮೂರೇ ದಿನಗಳಲ್ಲಿ ವರದಿ ಕೊಡಬೇಕು’ ಎಂದು ತಾಕೀತು ಮಾಡಿದರು.

ವಾರದೊಳಗೆ ವರದಿ ನೀಡಲು ಸರ್ವೇ ಇಲಾಖೆ ಅಧಿಕಾರಿಗಳು ಒಪ್ಪಿದರು.

-0-

ಮನೆ ತೆರವುಗೊಳಿಸಲು ಕಾಲಾವಕಾಶ

ಒತ್ತುವರಿ ಜಾಗದಲ್ಲಿ ಕೆಲವರು ಬಹು ಮಹಡಿ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಬಾಡಿಗೆ ಮನೆಯಲ್ಲಿ ನೆಲೆಸಿರುವ ಅನೇಕರಿಗೆ ತಾವು ನೆಲೆಸಿರುವ ಕಟ್ಟಡ ಇರುವುದು ಸರ್ಕಾರಿ ಸ್ವತ್ತಿನಲ್ಲಿ ಎಂಬ ವಿಚಾರ ತಿಳಿದಿರಲಿಲ್ಲ. ಅಧಿಕಾರಿಗಳು ಬುಧವಾರವೇ ಮನೆಗಳನ್ನು ತೆರವುಗೊಳಿಸುತ್ತಾರೆ ಎಂಬ ಆತಂಕ ಸ್ಥಳೀಯ ನಿವಾಸಿಗಳಲ್ಲಿ ಆವರಿಸಿತ್ತು. ಅವರಿಗೆ ಪರಿಸ್ಥಿತಿ ವಿವರಿಸಿದ ಜಿಲ್ಲಾಧಿಕಾರಿಗಳು ಮನೆಗಳನ್ನು ತೆರವು ಮಾಡಲು ಕಾಲಾವಕಾಶ ನೀಡುವುದಾಗಿ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು