ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ ಪ್ರಕರಣ: ಪಾಲಿಕೆ ಸದಸ್ಯನ ಆಪ್ತ ಸಹಾಯಕ ವಶಕ್ಕೆ

ಮತ್ತಷ್ಟು ಆರೋಪಿಗಳ ಬಂಧನ l ಗುತ್ತಿಗೆದಾರನ ಮೇಲೆ ಅನುಮಾನ
Last Updated 18 ಆಗಸ್ಟ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದಿದ್ದ ಗಲಭೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮಂಗಳವಾರ ವಿಚಾರಣೆಗೆ ಬಂದಿದ್ದ ಪಾಲಿಕೆ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್ ಮನೋಹರ್ ರಾಜ್‌ನನ್ನು (43) ವಶಕ್ಕೆ ಪಡೆದರು.

ನೋಟಿಸ್ ಪಡೆದಿದ್ದ ಸಂಪತ್ ರಾಜ್ ಜೊತೆಯಲ್ಲಿ ಅರುಣ್ ಸಹ ಬಂದಿದ್ದ. ಆತನನ್ನು ವಶಕ್ಕೆ ಪಡೆದ ಪೊಲೀಸರು, ಸಂಪತ್‌ ರಾಜ್ ಅವರನ್ನು ಮಾತ್ರ ವಾಪಸು ಕಳುಹಿಸಿದರು. ರಾತ್ರಿಯೂ ಅರುಣ್ ವಿಚಾರಣೆ ಮುಂದುವರಿದಿತ್ತು.

ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಡಿಸಿಪಿಗಳಾದ ರವಿಕುಮಾರ್ ಹಾಗೂ ಕುಲದೀಪ್ ಜೈನ್ ಸಮ್ಮುಖದಲ್ಲಿ ತನಿಖಾಧಿಕಾರಿಯು ಪಾಲಿಕೆ ಸದಸ್ಯರನ್ನು ವಿಚಾರಣೆ ನಡೆಸಿದರು.

ಗುತ್ತಿಗೆದಾರನ ಮೇಲೆ ಅನುಮಾನ: ‘ವಶಕ್ಕೆ ಪಡೆದಿರುವ ಅರುಣ್, ಪ್ರಥಮ ದರ್ಜೆ ಗುತ್ತಿಗೆದಾರ. 9 ವರ್ಷದಿಂದ ಸಂಪತ್ ರಾಜ್ ಅವರ ಜೊತೆ ಇದ್ದಾನೆ. ತಮಿಳುನಾಡಿನ ಅರುಣ್, ಗಲಭೆ ದಿನ ಸ್ಥಳದಲ್ಲಿದ್ದು ಗಲಭೆಕೋರರ ಜತೆ ಮಾತಾಡಿರುವುದಕ್ಕೆ ಕೆಲ ಪುರಾವೆಗಳು ಸಿಕ್ಕಿದ್ದವು. ಅವುಗಳ ಬಗ್ಗೆ ನಿಖರ ಮಾಹಿತಿ ಪಡೆಯಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಸಂಪತ್ ರಾಜ್ ಬಳಸುವ ಸಿಮ್ ಕಾರ್ಡ್ ಅರುಣ್ ಹೆಸರಿನಲ್ಲಿದೆ. ಆದರೆ, ಅದು ತನ್ನದೇ ಸಿಮ್ ಎಂದು ಆತ ಹೇಳುತ್ತಿದ್ದಾನೆ. ಅದರಲ್ಲಿ ಸಂಪತ್ ರಾಜ್ ಮಾತಾಡುವುದಿಲ್ಲವೆಂದು ತಿಳಿಸುತ್ತಿದ್ದಾನೆ’ ಎಂದೂ ವಿವರಿಸಿದರು.

ಲೈವ್ ಮಾಡಿದ್ದ ಆರೋಪಿಗಳ ಬಂಧನ: ಗಲಭೆ ನಡೆಯುತ್ತಿದ್ದಾಗ ಅದರ ವಿಡಿಯೊವನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ಲೈವ್ ಮಾಡಿ ಯುವಕರನ್ನು ಪ್ರಚೋದಿಸಿದ್ದ ಆರೋಪದಡಿ ಜಾಕೀರ್ ಹಾಗೂ ಸೈಯದ್ ಸೊಹೈಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಲೈವ್ ವಿಡಿಯೊ ನೋಡಿ ಸಾಕಷ್ಟು ಮಂದಿ ಸ್ಥಳಕ್ಕೆ ಬಂದು ಗಲಭೆ ಸೃಷ್ಟಿಸಿದ್ದರು. ಇನ್ನೊಬ್ಬ ಆರೋಪಿ ಮುದಾಸೀರ್ ಅಹಮ್ಮದ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಬಿಬಿಎಂಪಿ ಸದಸ್ಯರ ವಿಚಾರಣೆ
ಗಲಭೆ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದಡಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಸದಸ್ಯರಾದ ಸಂಪತ್ ರಾಜ್ ಹಾಗೂ ಜಾಕೀರ್‌ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸೋಮವಾರ ನೋಟಿಸ್‌ ಪಡೆದಿದ್ದ ಇಬ್ಬರೂ ಮಂಗಳವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ತನಿಖಾಧಿಕಾರಿ ಎದುರು ಹಾಜರಾದರು. 6 ಗಂಟೆ ವಿಚಾರಣೆ ನಡೆಸಿ, ಲಿಖಿತ ಹೇಳಿಕೆ ಪಡೆದು ವಾಪಸ್ ಕಳುಹಿಸಿದರು. ‘ಶಾಸಕರ ವಿರುದ್ಧ ಪ್ರತಿಭಟನೆಗೆ ಹಾಗೂ ಗಲಭೆಗೆ ಕುಮ್ಮಕ್ಕು ನೀಡಿಲ್ಲ. ಗಲಭೆ ಬಗ್ಗೆ ವಾರ್ಡ್‌ನ ಕೆಲ ಯುವಕರು ನಮಗೆ ಕರೆ ಮಾಡಿ ಮಾತಾಡಿರುವುದು ನಿಜ. ಗಲಭೆಗೆ ಕುಮ್ಮಕ್ಕು ನೀಡುವ ಮಾತಾಡಿಲ್ಲ. ನಮ್ಮ ಜತೆ ಸಂಪರ್ಕದಲ್ಲಿದ್ದ ಯುವಕರು ಗಲಭೆಯಲ್ಲಿ ತೊಡಗಿರಬಹುದು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಸದಸ್ಯರಿಬ್ಬರು 20 ಪುಟಗಳ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.

**

ನನಗೂ ಘಟನೆಗೂ ಸಂಬಂಧ ಇಲ್ಲ. ಆದರೂ ನಮ್ಮ ಹೆಸರು ಏಕೆ ಬಂತು ಎಂಬುದು ಗೊತ್ತಿಲ್ಲ. ಗಲಭೆ ನಡೆದಾಗ ನಾನು ಮನೆಯಲ್ಲೇ ಇದ್ದೆ. ಪ್ರಕರಣದ ತನಿಖಾ ಹಂತದಲ್ಲಿ ಏನು ಮಾತನಾಡಬಾರದೆಂಬ ಸೂಚನೆ ಇದೆ.
-ಸಂಪತ್ ರಾಜ್, ಪಾಲಿಕೆ ಸದಸ್ಯ

**

ಅಖಂಡ ಶ್ರೀನಿವಾಸಮೂರ್ತಿ ನಮ್ಮ ನಾಯಕರು. ಗಲಭೆಗೂ ನನಗೂ ಸಂಬಂಧವಿಲ್ಲ. ಸಿಸಿಬಿ ಅಧಿಕಾರಿಗಳು ಕೇಳಿದ ‍ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ತನಿಖೆಗೆ ನನ್ನ ಸಹಕಾರ ಇರುವುದಾಗಿ ಹೇಳಿದ್ದೇನೆ.
-ಜಾಕೀರ್, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT