ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜೆ ಹಳ್ಳಿ ಗಲಭೆ: 247 ಮಂದಿ ವಿರುದ್ಧ ಚಾರ್ಜ್‌ಶೀಟ್

* ತನಿಖೆ ಹೊಣೆ ಹೊತ್ತಿದ್ದ ಎನ್‌ಐಎ * 50 ಆರೋಪಿಗಳ ವಿರುದ್ಧ ಯುಎಪಿ
Last Updated 9 ಫೆಬ್ರುವರಿ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, 247 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

2020ರ ಆಗಸ್ಟ್ 11ರಂದು ರಾತ್ರಿ ‍ಪೊಲೀಸ್ ಠಾಣೆ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಇತರರ ಮನೆಗಳ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು, ಬೆಂಕಿ ಹಚ್ಚಿದ್ದರು. ಕಲ್ಲು ತೂರಾಟ ನಡೆಸಿ, ವಾಹನಗಳನ್ನೂ ಸುಟ್ಟು ಹಾಕಿದ್ದರು. ಈ ಗಲಭೆಯಿಂದಾಗಿ ಕೋಟ್ಯಂತರ ರೂಪಾಯಿ ಹಾನಿ ಆಗಿತ್ತು. ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ್ದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು.

ಆರಂಭದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, 180ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಇದರ ನಡುವೆಯೇ ತನಿಖೆ ಹೊಣೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ನಗರದಲ್ಲಿ ಮೊಕ್ಕಾಂ ಹೂಡಿದ್ದ ಎನ್‌ಐಎ ಐಜಿಪಿ ನೇತೃತ್ವದ ತಂಡ, ಎಲ್ಲ ಆಯಾಮದಲ್ಲಿ ತನಿಖೆ ನಡೆಸಿ ಇದೀಗ ನ್ಯಾಯಾಲಯಕ್ಕೆ ಶುಕ್ರವಾರ (ಫೆ. 5) ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಮುಖಂಡರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ. ಎಸ್‌ಡಿಪಿಐ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಷರೀಫ್, ಕೆ.ಜಿ.ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್, ಮುಖಂಡರಾದ ಮುಜಾಮಿಲ್ ಪಾಷಾ, ರೂಬಾನ್ ವಗಾಸ್, ಶಬ್ಬರ್ ಖಾನ್ ಹಾಗೂ ಶೇಖ್ ಅಜ್ಮಲ್‌ ಸೇರಿ ಹಲವು ಆರೋಪಿಗಳ ಹೆಸರು ಪಟ್ಟಿಯಲ್ಲಿದೆ. ಇವರೆಲ್ಲ ಸೇರಿಕೊಂಡು ಆಗಸ್ಟ್ 11ರಂದು ಸಂಜೆ ಥಣಿಸಂದ್ರ ಹಾಗೂ ಕೆ.ಜಿ.ಹಳ್ಳಿ ವಾರ್ಡ್‌ನಲ್ಲಿ ಸಭೆ ಮಾಡಿ, ಪೂರ್ವ ತಯಾರಿ ಮಾಡಿಕೊಂಡು ಗಲಭೆ ಸೃಷ್ಟಿಸಿದ್ದರು ಎಂಬ ಸಂಗತಿಯನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ಪೈಕಿ 50ಕ್ಕೂ ಹೆಚ್ಚು ಮಂದಿ ವಿರುದ್ಧ ಮಾತ್ರ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿ) ಪ‍್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅದನ್ನೇ ಪಟ್ಟಿಯಲ್ಲೇ ತಿಳಿಸಲಾಗಿದೆ.

‘ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ಕೆಲ ಮುಖಂಡರು ಗಲಭೆ ಸ್ಥಳದಲ್ಲಿದ್ದರು. ಇನ್ನು ಹಲವರು ಪ್ರಚೋದನೆ ನೀಡಿದ್ದರು. ಎಲ್ಲ ಆರೋಪಗಳಿಗೂ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿದಾರರೂ ಇದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ತನಿಖೆ ಮುಂದುವರಿಕೆ’

‘ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಸದ್ಯ 247 ಮಂದಿ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನು 70ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪ್ರತ್ಯೇಕ ಪಟ್ಟಿ ಸಲ್ಲಿಸಲಾಗುವುದು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT