ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಲಭೆ: ಪರಿಹಾರದ ಅಂಶಗಳು ಕಾನೂನಾಗಲಿ’

‘ಡಿ.ಜೆ ಹಳ್ಳಿ ಗಲಭೆಯ ಕೋಮುವಾದೀಕರಣ' ಸತ್ಯಶೋಧನಾ ವರದಿ ಬಿಡುಗಡೆ
Last Updated 17 ಸೆಪ್ಟೆಂಬರ್ 2020, 7:00 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಗಲಭೆಗಳಲ್ಲಿ ಅಮಾಯಕರಿಗೆ ನಷ್ಟವಾಗಿದ್ದರೆ ಪರಿಹಾರ ಕೊಡಬೇಕು ಎಂಬ ಬಗ್ಗೆ ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಆದರೆ, ಈ ಕುರಿತು ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಹೀಗಾಗಿ, ಸೂಕ್ತ ಕಾನೂನು ರೂಪಿಸುವ ಕೆಲಸವಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಲಹೆ ನೀಡಿದರು.

ಬೆಂಗಳೂರು ನಾಗರಿಕರ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಿರುವ‘ಡಿ.ಜೆ ಹಳ್ಳಿ ಗಲಭೆಯ ಕೋಮುವಾದೀಕರಣ' ಎಂಬ ಸತ್ಯಶೋಧನಾ ವರದಿಯನ್ನು ಬುಧವಾರ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗಲಭೆ ಕುರಿತು ಅನೇಕರು ಸತ್ಯಶೋಧನಾ ವರದಿ ತಯಾರಿಸಿದರು. ಕಾಂಗ್ರೆಸ್‌ ಪಕ್ಷ ಕೂಡ ವರದಿ ಹೊರತಂದಿತು. ಆದರೆ, ಈಗ ಈ ಸಂಸ್ಥೆಗಳು ಮಾಡಿರುವ ವರದಿ ಸತ್ಯಕ್ಕೆ ಹತ್ತಿರವಾಗಿದೆ. ಖುದ್ದಾಗಿ ಸ್ಥಳಕ್ಕೆ ಹೋಗಿ ಜನರ, ಅಧಿಕಾರಿಗಳ ಹೇಳಿಕೆ ಪಡೆದು ವರದಿ ಮಾಡಿದ್ದಾರೆ’ ಎಂದರು.

‘ಲೂಟಿಕೋರರು, ಏಕತೆ ಮುರಿಯುವವರು, ಚುನಾವಣೆಯ ಕಾರಣದಿಂದ ಈ ಗಲಭೆಯನ್ನು ಬಳಸಿಕೊಳ್ಳುವವರು ಬಹಳಷ್ಟಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ತಾಳ್ಮೆ, ಸಹನೆ ಬೆಳೆಸುವ ಕೆಲಸವಾಗಬೇಕಾಗಿದೆ’ ಎಂದರು.

ಪತ್ರಕರ್ತ ಇಂದೂಧರ ಹೊನ್ನಾಪುರ, ‘ಬಹಳಷ್ಟು ಪ್ರಕರಣಗಳಲ್ಲಿ ಆ ಸಂದರ್ಭದ ಪ್ರಚೋದನೆಯಿಂದಾಗಿ ಗಲಭೆಗಳು ಆಗಿರುತ್ತವೆಯೇ ವಿನಾ ಪೂರ್ವನಿಯೋಜಿತವಾಗಿರುವುದಿಲ್ಲ. ಆದರೆ, ಆ ನಂತರ ಅವುಗಳಿಗೆ ಕೋಮುಬಣ್ಣ ಬಳಿಯಲಾಗುತ್ತದೆ ಮತ್ತು ಇಂತಹ ಘಟನೆಗಳಿಂದ ರಾಜಕೀಯ ಲಾಭ ಪಡೆಯಲಾಗುತ್ತದೆ’ ಎಂದರು.

‘ಗಲಭೆಯನ್ನು ಆ ಕ್ಷಣಕ್ಕೇ ಮುಗಿಸುವ ಶಕ್ತಿ ಇದ್ದದ್ದು ಪೊಲೀಸರಿಗೆ. ಜನರು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿಯೇ, ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಹೇಳಿ ಆ ಪ್ರತಿಯನ್ನು ತೋರಿಸಿದ್ದರೆ ಪ್ರಕರಣ ಅಷ್ಟು ತೀವ್ರಸ್ವರೂಪ ಪಡೆಯುತ್ತಿರಲಿಲ್ಲ’ ಎಂದರು.

‘ಈ ಸತ್ಯಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಸಂಸ್ಥೆಯ ವಿನಯ್‌ ಶ್ರೀನಿವಾಸ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT