ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಹೆಚ್ಚಳ ವಾಪಸು ಪಡೆಯದಿದ್ದರೆ ಹೋರಾಟ ಅನಿವಾರ್ಯ: ಡಿಕೆಶಿ

Last Updated 9 ನವೆಂಬರ್ 2020, 10:31 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯುತ್ ದರ ಏರಿಕೆ ಜನ ವಿರೋಧಿ ನೀತಿ. ದರ ಹೆಚ್ಚಳ ಆದೇಶವನ್ನು ರಾಜ್ಯ ಸರ್ಕಾರ ವಾರದೊಳಗೆ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನಾನು ಇಂಧನ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನನಗೂ ಅಲ್ಪಸ್ವಲ್ಪ ಮಾಹಿತಿಯಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹೀಗಿರುವಾಗ ವಿದ್ಯುತ್‌ ದರ ಏರಿಕೆ ಮಾಡಿದ್ದು ಸರಿಯಲ್ಲ’ ಎಂದರು.

‘ದೇಶ, ರಾಜ್ಯಗಳು ಆರ್ಥಿಕ ಸಂಕಷ್ಟಲ್ಲಿವೆ. ಇಂಥ ಸಂದರ್ಭದಲ್ಲಿ ಪ್ರತಿ ಯೂನಿಟ್‌ಗೆ 40 ಪೈಸೆಯಂತೆ ಸರ್ಕಾರ ವಿದ್ಯುತ್‌ ದರ ಹೆಚ್ಚಳ ಮಾಡಿದೆ. ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಇದೇ 23ರಿಂದ 28ರವರೆಗೆ ಎಲ್ಲ ತಾಲ್ಲೂಕು ಕೇಂದ್ರದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಅಶೋಕ್‌ಕುಮಾರ್‌ ಅವರ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾಲ್ವರು ಕುಲಪತಿಗಳ ನೇಮಕ ವಿಚಾರದಲ್ಲಿ ವ್ಯವಹಾರನಡೆದಿದೆ. ಹಣ ಕಳೆದುಕೊಂಡ ಪ್ರೊ. ಅಶೋಕ್‌ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಬಹಳ ದೊಡ್ಡವರ ಕೈವಾಡ ಅದರಲ್ಲಿದೆ. ಯಾವ ಸಚಿವರು, ಯಾರು ಅವರಿಂದ ಹಣ ಪಡೆದಿದ್ದಾರೊ ಗೊತ್ತಿಲ್ಲ. ಅವರ ಆತ್ಮಹತ್ಯೆಯ ಹಿಂದೆ ₹ 2.50 ಕೋಟಿಯ ರಹಸ್ಯ ಅಡಗಿದೆ. ಕುಲಪತಿಯಾಗುವ ಆಸೆಯಿಂದ ಹಣ ಕಳೆದುಕೊಂಡಿದ್ದಾರೆ. ಸರ್ಕಾರದಲ್ಲಿರುವವರೇ ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ’ ಎಂದರು.

‘ಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಸಾರ್ವಜನಿಕರು, ವಿಧಾನಸೌಧಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶ್ವವಿದ್ಯಾಲಯಗಳ ಸಿಬ್ಬಂದಿ, ವಿದ್ಯಾರ್ಥಿಗಳೂ ಈ ವಿಷಯ ಬಗ್ಗೆ ಮಾತನಾಡುತ್ತಿದ್ದಾರೆ. ಕುಲಪತಿ ನೇಮಕ ವ್ಯಾಪಾರವಾಗಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯಿಂದ ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ‘ಉಪ ಚುನಾವಣೆ ನಡೆದಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಜನರ ಅಭಿಪ್ರಾಯವೂ ಇದೇ ಆಗಿದೆ’ ಎಂದರು.

ಮಸ್ಕಿ‌ಯ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, ‘ತುರ್ವಿಹಾಳ ಕಾಂಗ್ರೆಸ್‌ ಸೇರ್ಪಡೆಯಾಗುತ್ತೇನೆ ಅಂದಿದ್ದರು. ನನ್ನ ಜೊತೆಗೂ ಮಾತುಕತೆ ನಡೆಸಿದ್ದರು. ಪಕ್ಷದ ಅಧ್ಯಕ್ಷರು, ವಿರೋಧ ಪಕ್ಷ ನಾಯಕರ ಜೊತೆಗೂ ಚರ್ಚೆ ಮಾಡಿದ್ದಾರೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಪ್ರಿಯಾಂಕ್‌ ಖರ್ಗೆ, ಮುಖಂಡರಾದ ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT