ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡರಂಗೇಗೌಡರಿಗೆ ಚಿತ್ರಸಾಹಿತಿ ಹಣೆಪಟ್ಟಿ ಕಟ್ಟಲಾಗಿದೆ: ಮನು ಬಳಿಗಾರ್

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಬೇಸರ
Last Updated 7 ಫೆಬ್ರುವರಿ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ಗದ್ಯ ಪ್ರಕಾರದಲ್ಲಿಯೂ ಸಾಹಿತ್ಯ ಸೃಷ್ಟಿಸಿರುವ ದೊಡ್ಡರಂಗೇಗೌಡ ಅವರಿಗೆ ಚಿತ್ರಸಾಹಿತಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಅವರ ಸಾಹಿತ್ಯ ಸೇವೆಗೆ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಪಂಪ ಪ್ರಶಸ್ತಿ’ ಸಲ್ಲಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಆಗ್ರಹಿಸಿದರು.

ದೊಡ್ಡರಂಗೇಗೌಡ ಅವರ 77ನೇ ಹುಟ್ಟುಹಬ್ಬದ ಪ್ರಯುಕ್ತ ‘ಸಮನ್ವಯ ಸಾಹಿತಿ ಡಾ. ದೊಡ್ಡರಂಗೇಗೌಡರ ಅಭಿಮಾನಿಗಳ ಬಳಗ’ ಹಾಗೂ ‘ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ’ ಜಂಟಿಯಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ ‘ಕಾವ್ಯ ವೈವಿಧ್ಯಮಯ ಹಾಗೂ ಬಾಳ ಬಾಂಧವ್ಯದ ಹೆಜ್ಜೆ ಗುರುತುಗಳ ಮೆಲುಕು’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ದೊಡ್ಡರಂಗೇಗೌಡ ಅವರು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡದಲ್ಲಿ ಪಾಂಡಿತ್ಯ ಹೊಂದಿದ್ದಾರೆ. 2017ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಆಶಯ ನುಡಿಗಳನ್ನು ಆಡಿದ್ದರು. ಕನ್ನಡ ಸಾಹಿತ್ಯದಲ್ಲಿ ಗದ್ಯ ಪ್ರಕಾರಕ್ಕೂ ಕೊಡುಗೆ ನೀಡಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರುವ ಮೊದಲು ಸರ್ಕಾರ ಪಂಪ ಪ್ರಶಸ್ತಿ ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ತಿಳಿಸಿದರು.

‘ಪರಿಷತ್ತಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ದೊಡ್ಡರಂಗೇಗೌಡ ಅವರಿಗೆ ‘ನೃಪ‍ತುಂಗ ಪ್ರಶಸ್ತಿ’ ನೀಡಬೇಕು ಅಂದುಕೊಂಡೆ. ಆದರೆ, ಅವರು ₹ 7 ಲಕ್ಷ ನಗದು ಹೊಂದಿದ್ದ ಈ ಪ್ರಶಸ್ತಿಯನ್ನು ಆಗ ನಿರಾಕರಿಸಿದ್ದರು. ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಅವರು ಯಾವುದೇ ಅಭ್ಯರ್ಥಿ, ಜಾತಿ ಪರ ನಿಲ್ಲಲಿಲ್ಲ. ಅವರ ಈ ನಡೆ ಮಾದರಿಯಾಗಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ‘ಸರ್ಕಾರಗಳು ದೊಡ್ಡರಂಗೇಗೌಡ ಅವರನ್ನು ತುಳಿಯುತ್ತಲೇ ಬಂದಿವೆ. ಅವರಿಗೆ ಪ್ರತಿಷ್ಠಿತ ಗೌರವಗಳು ಈಗಾಗಲೇ ಸಲ್ಲಬೇಕಾಗಿತ್ತು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಕೋವಿಡ್ ಕಾರಣ ಅವರು ಮೂರು ವರ್ಷ ಸರ್ವಾಧ್ಯಕ್ಷರಾಗಿಯೇ ಉಳಿದಿದ್ದರು. ಇದು ತಕ್ಕ ಮಟ್ಟಿಗೆ ಸಮಾಧಾನ ತಂದಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT