ಭಾನುವಾರ, ಮೇ 16, 2021
26 °C

‘ಚಿತಾಗಾರ ಸಿಬ್ಬಂದಿಗೆ ವೇತನ ಪಾವತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರದ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ನಂತರ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ಶುಕ್ರವಾರ ಕಲ್ಲಹಳ್ಳಿ ವಿದ್ಯುತ್‌ ಚಿತಾಗಾರಕ್ಕೆ ಭೇಟಿ ನೀಡಿ, ಸಿಬ್ಬಂದಿಯ ಅಹವಾಲು ಆಲಿಸಿತು. 

ಆಯೋಗದ ಸದಸ್ಯ, ವಕೀಲ ಎಚ್. ವೆಂಕಟೇಶ ದೊಡ್ಡೇರಿ ಅವರು, ಚಿತಾಗಾರ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿ, ಸಮಸ್ಯೆ ಆಲಿಸಿದರು.

‘ನೌಕರರಿಗೆ ಸಂಬಳ ನೀಡಬೇಕು, ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಅವರ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ, ಕಾಯಂ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಕೋವಿಡ್‌ ಶವಗಳ ಸಂಸ್ಕಾರದ ವೇಳೆ ಬೇಕಾಗುವ ಅಗತ್ಯ ಸುರಕ್ಷಾ ಪರಿಕರಗಳನ್ನು ಸಿಬ್ಬಂದಿಗೆ ಒದಗಿಸಬೇಕು’ ಎಂದೂ ಅವರು ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್‌, ‘ಬಿಬಿಎಂಪಿಯಲ್ಲಿ ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರ ಸಿಬ್ಬಂದಿಯ ಪೈಕಿ ಶೇ 95 ಮಂದಿಗೆ ವೇತನ ಬಿಡುಗಡೆ ಮಾಡಲಾಗಿದೆ. ಉಳಿದ ಶೇ 5ರಷ್ಟು ಸಿಬ್ಬಂದಿಗೆ ಕೂಡಲೇ ವೇತನ ನೀಡಲಾಗುವುದು’ ಎಂದರು.

‘ಚಿತಾಗಾರ ಸಿಬ್ಬಂದಿಗೆ ಸಮವಸ್ತ್ರ ನೀಡುವುದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ನೀತಿ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಬಿಎಂಪಿ ಉಪ ಆಯುಕ್ತ ರಂಗನಾಥ, ಸ್ಮಶಾನ ನೌಕರರ ಸಂಘದ ಅಧ್ಯಕ್ಷ ಆ. ಸುರೇಶ್, ಕಾರ್ಯದರ್ಶಿ ರಾಜು ಕಲ್ಲಹಳ್ಳಿ ಇದ್ದರು.

ಚಿತಾಗಾರ ಸಿಬ್ಬಂದಿಗೆ 10 ತಿಂಗಳಿನಿಂದ ವೇತನ ಪಾವತಿಯಾಗದಿರುವ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.