ಸೋಮವಾರ, ಮೇ 17, 2021
28 °C

ಡಾಲರ್‌ ವಿನಿಮಯ ಸೋಗಿನಲ್ಲಿ ₹ 5 ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಾಲರ್‌ ವಿನಿಮಯ ಸೋಗಿನಲ್ಲಿ ಕಂಪನಿಯೊಂದರ ಪ್ರತಿನಿಧಿಯನ್ನು ಹೋಟೆಲ್‌ಗೆ ಕರೆಸಿಕೊಂಡ ಮೂವರು ಕಳ್ಳರು, ಬಳಿಕ ಪ್ರತಿನಿಧಿ ಬಳಿ ಇದ್ದ ₹ 5 ಲಕ್ಷ ನಗದು ಕದ್ದೊಯ್ದಿದ್ದಾರೆ.

ಈ ಸಂಬಂಧ ಪ್ರತಿನಿಧಿ, ಜೆ.ಪಿ.ಸಂತೋಷ್ ಎಂಬುವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

‘ಜ. 31ರಂದು ಕಂಪನಿಯ ವ್ಯವಸ್ಥಾಪಕರಿಗೆ ಕರೆ ಮಾಡಿದ್ದ ಆರೋಪಿ, ತನ್ನ ಹೆಸರು ಅಭಿಲಾಷ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ಆನಂದರಾವ್ ವೃತ್ತ ಬಳಿಯ ಹೋಟೆಲೊಂದರಲ್ಲಿ 14 ವಿದೇಶಿಯರು ಉಳಿದುಕೊಂಡಿದ್ದಾರೆ. ಅವರ ಬಳಿ 7 ಸಾವಿರ ಅಮೆರಿಕನ್ ಡಾಲರ್ ಇದೆ. ಅದನ್ನು ರೂಪಾಯಿಗೆ ವಿನಿಮಯ ಮಾಡಿಕೊಡುವಂತೆ ತಿಳಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಾತು ನಂಬಿದ್ದ ವ್ಯವಸ್ಥಾಪಕ, ಸಂತೋಷ್ ಕೈಗೆ ₹ 5 ಲಕ್ಷ ಕೊಟ್ಟು ಹೋಟೆಲ್‌ಗೆ ಕಳುಹಿಸಿದ್ದರು. ಸಂತೋಷ್‌ನನ್ನು ಭೇಟಿಯಾಗಿದ್ದ ಮೂವರು ಆರೋಪಿಗಳು ಹೋಟೆಲ್‌ನ ಸಭಾಂಗಣಕ್ಕೆ ಕರೆದೊಯ್ದಿದ್ದರು. ಡಾಲರ್ ತರುವುದಾಗಿ ಹೇಳಿ ಒಬ್ಬ ಹೊರಟು ಹೋಗಿದ್ದ. ಇನ್ನಿಬ್ಬರು ಡಾಲರ್‌ ವರ್ಗಾವಣೆ ಬಗ್ಗೆ ಮಾತನಾಡುತ್ತಿದ್ದರು.’

‘ಸಂತೋಷ್ ಅವರ ಗಮನ ಬೇರೆಡೆ ಸೆಳೆದಿದ್ದ ಆರೋಪಿಗಳು, ಬ್ಯಾಗ್‌ನಲ್ಲಿದ್ದ ₹ 5 ಲಕ್ಷ ಕದ್ದಿದ್ದರು. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಆರೋಪಿಗಳು ಅಲ್ಲಿಂದ ಎದ್ದು ಹೋಗಿದ್ದಾರೆ. ಸಮಯವಾದರೂ ಆರೋಪಿಗಳು ವಾಪಸು ಬಂದಿರಲಿಲ್ಲ. ಅನುಮಾನಗೊಂಡು ಬ್ಯಾಗ್‌ ನೋಡಿದಾಗ ಹಣ ಇರಲಿಲ್ಲ’ ಎಂದು ಪೊಲೀಸರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು