ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು= ನಾಗರಿಕರಿಗೆ ಕಿರಿಕಿರಿ

Last Updated 5 ಸೆಪ್ಟೆಂಬರ್ 2021, 22:52 IST
ಅಕ್ಷರ ಗಾತ್ರ

ಬೆಂಗಳೂರು: ಹೆಣ್ಣೂರಿನ ಭೈರವೇಶ್ವರ ಬಡಾವಣೆಯ ಎರಡನೇ ಮುಖ್ಯರಸ್ತೆಯ ಮೇಲೆ ನಾಲ್ಕು ದಿನಗಳಿಂದ ಒಳಚರಂಡಿ ನೀರು ಹರಿಯುತ್ತಿದ್ದು ಇದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.

‘ಪ್ರತಿ ಬಾರಿ ಮಳೆಗಾಲ ಶುರುವಾದಾಗಲೂ ಸಮಸ್ಯೆ ಸೃಷ್ಟಿಯಾಗುತ್ತದೆ. ಕೆಲ ವರ್ಷಗಳ ಹಿಂದೆ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪನವರೇ ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವ ಭರವಸೆ ನೀಡಿದ್ದರು. ಹೀಗಿದ್ದರೂ ಯಾವ ಸುಧಾರಣೆಯೂ ಆಗಿಲ್ಲ’ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರಯ್ಯದೂರಿದರು.

‘ಅಧಿಕಾರಿಗಳಾದ ಚನ್ನಬಸಪ್ಪ ಹಾಗೂ ಛಲಪತಿ ಅವರಿಗೆ ನಿತ್ಯವೂ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೇವೆ. ಹೀಗಿದ್ದರೂ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಸ್ಥಳೀಯ ಶಾಸಕ ಕೆ.ಜೆ.ಜಾರ್ಜ್‌ ಅವರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಪೈಪ್‌ಲೈನ್‌ ಅಳವಡಿಸಲು ರಸ್ತೆಯನ್ನೂ ಅಗೆಯಲಾಗಿದ್ದು, ಇದರಿಂದಾಗಿ ಮನೆಗಳ ಆವರಣಕ್ಕೆ ಚರಂಡಿ ನೀರು ನುಗ್ಗುತ್ತಿದೆ. ದುರ್ವಾಸನೆಯಿಂದಾಗಿ ಮನೆಯಲ್ಲಿ ಇರಲೂ ಆಗುತ್ತಿಲ್ಲ’ ಎಂದೂ ಅಳಲು ತೋಡಿಕೊಂಡರು.

‘15 ವರ್ಷಗಳ ಹಿಂದೆ ಬಡಾವಣೆ ನಿರ್ಮಾಣವಾದಾಗ ಕೆಲವೇ ಕೆಲವು ಮನೆಗಳು ಇಲ್ಲಿದ್ದವು. ಆಗ ಅಂತಹ ಸಮಸ್ಯೆ ಇರಲಿಲ್ಲ. 4 ರಿಂದ 8ನೇ ಮುಖ್ಯರಸ್ತೆವರೆಗಿನ ನಿವಾಸಿಗಳು ತಗ್ಗುಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲ ಬಂದಾಗ ರಾಜಕಾಲುವೆ ತುಂಬಿ ಹರಿಯಲಿದ್ದು, ಆ ನೀರು ಚರಂಡಿಗೂ ನುಗ್ಗುತ್ತದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಈ ಗೋಳು ತಪ್ಪುತ್ತದೆ’ ಎಂದು ಮನವಿ ಮಾಡಿದರು.

‘ನಾಗರಿಕರಿಗೆ ಸಮಸ್ಯೆಯಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಶೀಘ್ರವೇ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಎನ್‌.ರಾಜೀವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT