ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವಿಸಿ ವಾಹನ ಚಾಲನೆ: ಶೀಘ್ರವೇ ಶುರು ತಪಾಸಣೆ

ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ಹೇಳಿಕೆ
Last Updated 18 ಫೆಬ್ರುವರಿ 2021, 7:47 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಸಂಚಾರ ಪೊಲೀಸರು ಶೀಘ್ರವೇ ತಪಾಸಣೆ ಆರಂಭಿಸಲಿದ್ದಾರೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

‘ಕಳೆದ ಮಾರ್ಚ್‌ನಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸುವ ಸಲುವಾಗಿ ಮದ್ಯ ಕುಡಿದು ವಾಹನ ಚಲಾಯಿಸುವವರ ತಪಾಸಣೆ ಹಾಗೂ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಲಾಗಿತ್ತು. ಈಗ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿ, ಅಪಘಾತ ಹಾಗೂ ಸಾವು ಸಂಭವಿಸುತ್ತಿರುವ ಪ್ರಕರಣಗಳೂ ಹೆಚ್ಚಾಗಿರುವುದರಿಂದ ಇಲಾಖೆ ಈ ನಿರ್ಧಾರ ಕೈಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.

‘ಇನ್ನು ಮುಂದೆ ಸಂಚಾರ ಪೊಲೀಸರು ಸ್ಯಾನಿಟೈಸ್‌ ಮಾಡಲಾದ ಆಲ್ಕೋಮೀಟರ್‌ಗಳನ್ನು ಬಳಸಬೇಕು. ಒಬ್ಬರಿಗೆ ಉಪಯೋಗಿಸಿದ ಆಲ್ಕೋಮೀಟರ್‌ ಉಪಕರಣವನ್ನು ಜಿಪ್ ಲಾಕ್ ಕವರ್‌ನಲ್ಲಿ ಪ್ರತ್ಯೇಕವಾಗಿ ಇಡಲಾಗುವುದು. ಒಬ್ಬರ ತಪಾಸಣೆಗೆ ಉಪಕರಣವನ್ನು ಒಂದು ಬಾರಿ ಮಾತ್ರ ಹಾಗೂ ಚಾಲಕರು ಹಾಗೂ ಸವಾರರಿಗೆ ಪ್ರತ್ಯೇಕ ಸ್ಟ್ರಾ ಬಳಸಲಾಗುವುದು’.

‘ತಪಾಸಣೆ ಮಾಡುವ ಪ್ರತಿ ಸಿಬ್ಬಂದಿ ಕಡ್ಡಾಯವಾಗಿ ಕೈಗವಸು, ಮಾಸ್ಕ್‌, ಮುಖಗವಸು ಬಳಸುವ ಜೊತೆಗೆ ತಪಾಸಣೆ ಬಳಿಕ ಸ್ಯಾನಿಟೈಸ್ ಮಾಡಬೇಕು. ಬಳಸಿದ ಉಪಕರಣವನ್ನು ಸ್ಯಾನಿಟೈಸ್ ಮಾಡಿ, ಕನಿಷ್ಠ ಮೂರು ದಿನಗಳವರೆಗೆ ಬಳಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಶೀಘ್ರವೇ ತಪಾಸಣೆ ಆರಂಭಿಸಲಾಗುವುದು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT