ಕುಡಿದ ಅಮಲಿನಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

ಬುಧವಾರ, ಜೂಲೈ 17, 2019
25 °C

ಕುಡಿದ ಅಮಲಿನಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿದ್ದ ಕಾರ್ಮಿಕರಿಬ್ಬರ ನಡುವೆ ಶುರುವಾದ ಜಗಳ ಜ್ಞಾನಸಾಗರ್ (35) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ. 

ತಮಿಳುನಾಡು ವೇಲೂರಿನ ಜ್ಞಾನಸಾಗರ್, ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಕೊಲೆ ಮಾಡಿದ ಆರೋಪದಡಿ, ಸ್ನೇಹಿತ ರಂಜಿತ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಜ್ಞಾನಸಾಗರ್ ಹಾಗೂ ರಂಜಿತ್, ಒಂದೇ ಊರಿನವರು. ರಾತ್ರಿ 11ರ ಸುಮಾರಿಗೆ ರಾಜರಾಜೇಶ್ವರಿನಗರದ ಮುಖ್ಯರಸ್ತೆಯಲ್ಲಿ ಇಬ್ಬರೂ ಮಾತನಾಡುತ್ತ ನಿಂತಿದ್ದರು. ಮಾತಿಗೆ ಮಾತು ಬೆಳೆದು ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರಂಜಿತ್, ಜ್ಞಾನಸಾಗರ ಅವರ ಮುಖಕ್ಕೆ ಗುದ್ದಿದ್ದ. ಕೆಳಗೆ ಬಿದ್ದ ಅವರ ತಲೆಯನ್ನು ನೆಲಕ್ಕೆ ಬಡಿದಿದ್ದ. ತೀವ್ರ ರಕ್ತಸ್ರಾವದಿಂದಾಗಿ ಜ್ಞಾನಸಾಗರ ಸ್ಥಳದಲ್ಲೇ ಮೃತಪಟ್ಟಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಸ್ಥಳೀಯರು, ದೃಶ್ಯ ನೋಡಿ ಗಾಬರಿಗೊಂಡಿದ್ದರು. ಅವರೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಘಟನೆ ಬಗ್ಗೆ ಅವರಿಂದಲೇ ಹೇಳಿಕೆ ಪಡೆಯಲಾಗಿದೆ’ ಎಂದರು.

‘ಜ್ಞಾನಸಾಗರ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದೆ. ಕೊಲೆಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ರಂಜಿತ್‌ ವಿಚಾರಣೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !