ಶುಕ್ರವಾರ, ಜೂನ್ 5, 2020
27 °C
ಊರಿಗೆ ತಲುಪಿಸುವುದಾಗಿ ಹೇಳಿ 1.36 ಲಕ್ಷ

ಟ್ರಕ್‌ ಚಾಲಕನಿಂದ ವಂಚನೆ ಬೀದಿಗೆ ಬಿದ್ದ ಕಾರ್ಮಿಕರು!

ಚಿರಂಜೀವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

Migrant workers

ಬೆಂಗಳೂರು: ಕೋವಿಡ್‌ ಭೀತಿಯಿಂದ ಅತಂತ್ರರಾಗಿರುವ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವುದಾಗಿ ಹೇಳಿ ₹1.36 ಲಕ್ಷ ವಂಚಿಸಿರುವ ಚಾಲಕನೊಬ್ಬ ಅವರನ್ನು ರಾಜ್ಯದ ಗಡಿಯಲ್ಲಿ ಬೀದಿಪಾಲು ಮಾಡಿ ಪರಾರಿಯಾಗಿದ್ದು, ಆಂಧ್ರ ಗಡಿಯಲ್ಲಿ ಪೊಲೀಸರ ಲಾಠಿ ರುಚಿ ನೋಡಿದ ಬಳಿಕ ಬೆಂಗಳೂರಿಗೆ ಹಿಂತಿರುಗಿದ್ದಾರೆ.

‘ಊರುಗಳಿಗೆ ಬಿಡುವುದಾಗಿ 56 ಕಾರ್ಮಿಕರನ್ನು ಹತ್ತಿಸಿಕೊಂಡ ಲಾರಿ ಚಾಲಕ ಪೊಲೀಸರ ತಪಾಸಣೆ ಇದೆ. ನಡೆದುಕೊಂಡು ಸ್ವಲ್ಪ ಮುಂದೆ ಬನ್ನಿ. ಆಮೇಲೆ ಮತ್ತೆ ಹತ್ತಿಕೊಳ್ಳಿ ಎಂದು ಇಳಿಸಿಹೋದ. ನಾವು ಗಡಿ ದಾಟುವಾಗ ಪೊಲೀಸರು ತಡೆದರು. ಕೆಲವರನ್ನು ಥಳಿಸಿದರು’ ಎಂದು ಬಿಹಾರದ ಕಾರ್ಮಿಕ ರಾಜೇಂದ್ರ ಪ್ರಸಾದ್‌  ತಿಳಿಸಿದರು.

‘ನಾವು, ಕಾರ್ಮಿಕರು ಗೌರಿಬಿದನೂರು ಕಡೆಗೆ ನಡೆದು ಹೋಗುವುದನ್ನು ಗಮನಿಸಿದೆವು. ಗಡಿ ಭಾಗದಿಂದ ಅವರು ಬರುತ್ತಿದ್ದರು. ಆಗಲೇ ಮಧ್ಯಾಹ್ನವಾಗಿತ್ತು. ಯಾರೂ ಊಟ ಮಾಡಿರಲಿಲ್ಲ. ಕಾರ್ಮಿಕರಲ್ಲಿ ಕೆಲವರನ್ನು ಪೊಲೀಸರು ಥಳಿಸಿದ್ದರು. ಊರಿಗೆ ಹೋಗಬೇಕೆಂದು ಅವರು ಹೇಳುತ್ತಿದ್ದರು. ಅವರಿಗೆ ಊಟದ  ವ್ಯವಸ್ಥೆ ಮಾಡಿ, ಅಧಿಕಾರಿಗಳೊಂದಿಗೆ
ಮಾತನಾಡಿ ಸಾರಿಗೆ ಸಂಸ್ಥೆ ಬಸ್‌ ನಲ್ಲಿ ಬೆಂಗಳೂರಿಗೆ ಕಳುಹಿಸಿದೆವು’ ಎಂದು ರಾಷ್ಟ್ರ ಸೇವಾ ದಳದ ಅಧ್ಯಕ್ಷ ಆಲಿಬಾಬಾ ಹೇಳಿದರು.

‘ಲಾರಿ ಚಾಲಕ ಉತ್ತರ ಪ್ರದೇಶದವನು. ಅವನ ಮಾತು ನಂಬಿದೆವು. ಗಡಿ ದಾಟಿದರೆ ಊರಿಗೆ ಬಿಡುವುದಾಗಿ  ಸಂಜೆವರೆಗೂ ಹೇಳುತ್ತಿದ್ದ. ಈಗ ಆತ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ನಮ್ಮ ಕರೆಗಳಿಗೆ ಉತ್ತರಿಸುತ್ತಿಲ್ಲ’ ಎಂದು ರಾಜೇಂದ್ರ ಪ್ರಸಾದ್‌ ಅಲವತ್ತುಕೊಂಡರು.

‘ಮೇಖ್ರಿ ವೃತ್ತದಿಂದ ರಾತ್ರಿಯಿಡೀ ನಡೆದುಕೊಂಡೇ ವೈಟ್‌ಫೀಲ್ಡ್‌ಗೆ ಬಂದಿರುವ ಕಾರ್ಮಿಕರು ಪೊಲೀಸ್‌ ಠಾಣೆ ಬಳಿ ಕುಳಿತಿದ್ದಾರೆ. ಇವರಲ್ಲಿ 10 ಮಂದಿ ಟ್ರೈನ್‌ ಟಿಕೆಟ್‌ ಕಾದಿರಿಸಿಕೊಂಡು ಊರಿಗೆ ಹೋಗಿದ್ದಾರೆ. ಉಳಿದವರಿಗೆ ಊಟವಿಲ್ಲ. ಮಲಗಲು ಜಾಗವಿಲ್ಲ. ಈ ಸುದ್ದಿ ತಿಳಿದ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಸದಸ್ಯರು ಊಟದ ವ್ಯವಸ್ಥೆ ಮಾಡಿದರು. 

‘ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಕಾರ್ಮಿಕ ಇಲಾಖೆಗೆ ಕರೆ ಮಾಡಿದರೂ ಪ್ರಯೋಜನ ಆಗಿಲ್ಲ’ ಎಂದು ಸಂಘಟನೆಯ ಸದಸ್ಯರೊಬ್ಬರು ತಿಳಿಸಿದರು.

‘ಕೆಲವರು ಈ ಗುಂಪಿನಿಂದ ಬೇರ್ಪಟ್ಟು ದುಡಿಮೆಗಾಗಿ ಚಂದಾಪುರ ಮತ್ತು ಅತ್ತಿಬೆಲೆ ಕಡೆಗೆ ಹೋಗಿದ್ದಾರೆ. ರೈಲ್ವೆ ಟಿಕೆಟ್‌ಗೆ ಬೇಕಾದ ಹಣ ಹೊಂದಿಸುವ ಉದ್ದೇಶದಿಂದ ನಡೆದುಕೊಂಡೇ ಹೋಗಿದ್ದಾರೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ಸರ್ಕಾರ ಗಮನ ಹರಿಸದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ’ ಎಂದು ಆಲಿಬಾಬಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು