ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟೇರಿಂಗ್’ ಹಿಡಿದ ಕೊಳೆಗೇರಿ ಮಹಿಳೆಯರು

ಬೆಂಗಳೂರು, ಜೈಪುರದ 60 ಮಂದಿಗೆ ಚಾಲನಾ ತರಬೇತಿ l 8 ಮಹಿಳೆಯರಿಗೆ ಕೆಲಸದ ಭರವಸೆ
Last Updated 1 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಳೆಗೇರಿ’ ಎಂಬ ಹಣೆಪಟ್ಟಿ ಕಟ್ಟಿಕೊಂಡ ಪ್ರದೇಶದ ಇಕ್ಕಟ್ಟಿನ ಜಾಗದಲ್ಲೇ ವಾಸವಿದ್ದುಕೊಂಡು ಬದುಕಿನ ಬಂಡಿ ಸಾಗಿಸುವ ಮಹಿಳೆಯರವರು. ಪತಿ, ಮಕ್ಕಳು, ತಂದೆ–ತಾಯಿ, ಸಂಬಂಧಿಕರ ಆರೈಕೆಯಲ್ಲೇ ಜೀವನ ಸವಿಸುವವರು. ಅಂಥ ಮಹಿಳೆಯರೀಗ ‘ಸ್ಟೇರಿಂಗ್’ ಹಿಡಿದು ಕಾರು ಓಡಿಸಲು ಸಜ್ಜಾಗಿದ್ದಾರೆ.

ಬೆಂಗಳೂರು ಹಾಗೂ ಜೈಪುರದ ಕೊಳೆಗೇರಿ ಪ್ರದೇಶದ 60 ಮಹಿಳೆಯರಿಗೆ ಕಾರು ಚಾಲನಾ ತರಬೇತಿ ನೀಡಲಾಗಿದ್ದು, ಅವರೆಲ್ಲರಿಗೂ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ ಸಭಾಭವನದಲ್ಲಿ ಭಾನುವಾರ ಜರುಗಲಿದೆ.

'ಆ್ಯಕ್ಷನ್ ಆ್ಯಡ್' ಸಂಘಟನೆಯು 'ಡಿಎಕ್ಸ್‌ಸಿ ಟೆಕ್ನಾಲಜೀಸ್‌' ಸಹಯೋಗದಲ್ಲಿಕೋರಮಂಗಲದ ಪ್ರಥಮ್ ಮೋಟರ್ಸ್‌ನ ಮಾರುತಿ ಡ್ರೈವಿಂಗ್ ಶಾಲೆ ತರಬೇತುದಾರರಿಂದ ಮಹಿಳೆಯರಿಗೆ ತರಬೇತಿ ಕೊಡಿಸಿದೆ.

2 ಬ್ಯಾಚ್‌ನಲ್ಲಿ ತರಬೇತಿ: ಬೆಂಗಳೂರಿನ 30 ಮಹಿಳೆಯರನ್ನು ಎರಡು ಬ್ಯಾಚ್‌ಗಳಾಗಿ ವಿಂಗಡಿಸಿ ತರಬೇತಿ ನೀಡಲಾಗಿದೆ. ಜೈಪುರದಲ್ಲೂ 30 ಮಹಿಳೆಯರಿಗೆ ಪ್ರತ್ಯೇಕವಾಗಿ ತರಬೇತಿ ಕೊಡಿಸಲಾಗಿದೆ.

‘ಚಾಲನೆ ಎಂಬುದು ಕೇವಲ ಪುರುಷರಿಗಷ್ಟೇ ಸೀಮಿತವಾದದ್ದು ಎಂಬ ಕಾಲವಿತ್ತು. ಮಹಿಳೆಯರು ಸಹ ಚಾಲನೆ ಮಾಡಲು ಸಮರ್ಥರು ಎಂಬುದನ್ನು ಈ ತರಬೇತಿ ತೋರಿಸಿಕೊಟ್ಟಿದೆ’ ಎಂದು ‘ಆ್ಯಕ್ಷನ್ಆ್ಯಡ್' ಸಂಘಟನೆ ಪ್ರತಿನಿಧಿ ಹೇಳಿದರು.

‘ಚಾಲನೆ ತರಬೇತಿಗೂ ಮುನ್ನ ‘ಕಲಿಕಾ ಪರವಾನಗಿ ಪತ್ರ (ಎಲ್‌ಎಲ್‌ಆರ್‌)’ ಪಡೆಯಬೇಕಿತ್ತು. ಹೀಗಾಗಿ, ಸಂಚಾರ ಸಿಗ್ನಲ್‌ಗಳ ಬಗ್ಗೆಯೇ ಹೆಚ್ಚು ದಿನಗಳವರೆಗೆ ಮಹಿಳೆಯರಿಗೆ ಕಲಿಸಲಾಯಿತು. ವಿಷಯವನ್ನು ಬಹುಬೇಗನೇ ಕಲಿತ ಮಹಿಳೆಯರು, ಆರ್‌ಟಿಒ ಎದುರು ಪರೀಕ್ಷೆ ಎದುರಿಸಿ ಎಲ್‌ಎಲ್‌ಆರ್‌ ಪಡೆಯುವಲ್ಲಿ ಯಶಸ್ವಿಯಾದರು. ಈಗ ಕಾರು ಚಾಲನೆಯನ್ನೂ ಸಂಪೂರ್ಣವಾಗಿ ಕಲಿತಿದ್ದು, ಪರವಾನಗಿ ಪಡೆಯುವ ಹಂತದಲ್ಲಿದ್ದಾರೆ’ ಎಂದು ತಿಳಿಸಿದರು.

‘ಕೊಳೆಗೇರಿ ಪ್ರದೇಶದ ಮಹಿಳೆಯರು, ಆರ್ಥಿಕವಾಗಿ ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಅವರಿಗೆ ಆರ್ಥಿಕವಾಗಿ ಬಲ ತುಂಬಲು ಈ ತರಬೇತಿ ನೀಡಲಾಗಿದೆ. ಸ್ವಾವಲಂಬಿ ಜೀವನ ನಡೆಸಲು ತರಬೇತಿ ಸಹಾಯಕವಾಗಲಿದೆ’ ಎಂದರು.

ಕೆಲಸಕ್ಕೆ ಆಫರ್‌: ಚಾಲನಾ ತರಬೇತಿ ವೇಳೆ ಉತ್ತಮ ಪ್ರದರ್ಶನ ತೋರಿದ 8 ಮಹಿಳೆಯರಿಗೆ, ‘ಗೋ ಪಿಂಕ್’ ಹಾಗೂ ‘ಟ್ಯಾಕ್ಸೆ’ ಕ್ಯಾಬ್‌ ಕಂಪನಿಗಳಿಂದ ಈಗಾಗಲೇ ಕೆಲಸದ ಆಫರ್ ಬಂದಿದೆ.

ಅಭಿಪ್ರಾಯಗಳು

ನಾನು ಚಾಲಕಿ ಆಗುತ್ತೇನೆಂದು ಕನಸು–ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ನನ್ನ ಸಾಮರ್ಥ್ಯವೇನು ಎಂಬುದು ಸಹ ಗೊತ್ತಿರಲಿಲ್ಲ. ಅದನ್ನು ಈ ತರಬೇತಿ ತಿಳಿಸಿಕೊಟ್ಟಿದೆ.
– ಗಾಯತ್ರಿ

*
ನನ್ನ ಬದುಕು ಬದಲಿಸಲು ಸುವರ್ಣ ಅವಕಾಶ ದೊರಕಿದಂತಾಗಿದೆ. ಚಾಲಕಿಯಾಗಿ ದುಡಿದು, ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿರುವ ನನ್ನ ತಂಗಿಯನ್ನು ಪುನಃ ಕಾಲೇಜಿಗೆ ಕಳುಹಿಸಲಿದ್ದೇನೆ.
– ಜಾನ್ಸಿ

*
2 ವರ್ಷಗಳ ಹಿಂದೆ ಪತಿ ತೀರಿಕೊಂಡರು. ಎರಡು ಮಕ್ಕಳನ್ನು ಸಾಕುವುದು ಕಷ್ಟವಾಯಿತು. ನಾನು ಸಹ ಬೇರೆಯವರಂತೆ ದುಡಿಯಬಲ್ಲೆ, ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಬಲ್ಲೆ ಎಂಬುದನ್ನು ಈ ತರಬೇತಿ ಹೇಳಿಕೊಟ್ಟಿದೆ.
– ಸುಕನ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT