ಸೋಮವಾರ, ಅಕ್ಟೋಬರ್ 26, 2020
27 °C

‘ಡ್ರಗ್ಸ್‌ ಜಾಲ ನಿಗ್ರಹಕ್ಕೆ ಇಚ್ಛಾಶಕ್ತಿ ಕೊರತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಾದಕ ವಸ್ತುಗಳ ಉತ್ಪಾದನೆ ಮತ್ತು ಬಳಕೆ ಮನುಕುಲಕ್ಕೆ ಕಂಟಕ. ಯುವ ಸಮೂಹ ಹೆಚ್ಚಾಗಿ ಈ ವ್ಯಸನಕ್ಕೆ ಬಲಿಯಾಗುತ್ತಿದೆ. ಡ್ರಗ್ಸ್‌ ಜಾಲ ನಿಯಂತ್ರಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು. 

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಅಖಿಲ ಭಾರತ ವಕೀಲರ ಒಕ್ಕೂಟವು ‘ಮಾದಕ ವಸ್ತು– ಸಮಸ್ಯೆ, ಸವಾಲು, ಪರಿಹಾರ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಆನ್‌ಲೈನ್‌ ವೆಬಿನಾರ್‌ನಲ್ಲಿ ಅವರು ಮಾತನಾಡಿದರು. 

‘ಅಂದಾಜಿನ ಪ್ರಕಾರ, ದೇಶದಲ್ಲಿ ಜನ ದಿನಕ್ಕೆ 1 ಟನ್‌ ಹೆರಾಯಿನ್‌ ಬಳಸುತ್ತಿದ್ದು, ಇದರ ಮೌಲ್ಯ ₹100 ಕೋಟಿ. 100ಕ್ಕೂ ಹೆಚ್ಚು ಬಲಿಷ್ಠ ಮಾಫಿಯಾಗಳು ಈ ದಂಧೆಯಲ್ಲಿ ತೊಡಗಿವೆ. ಇವುಗಳನ್ನು ತಡೆಯಲು ಕಾನೂನುಗಳಿದ್ದರೂ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು’ ಎಂದರು. 

‘ಡ್ರಗ್ಸ್‌ ಸೇವಿಸುವ ವ್ಯಸನಿಗಳು ತಮ್ಮ ವೃತ್ತಿ ಜೀವನ, ಕೌಟುಂಬಿಕ ಜೀವನ ಹಾಗೂ ಮಾನಸಿಕ–ದೈಹಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಜಾಗತಿಕವಾಗಿ ವ್ಯಾಪಿಸಿರುವ ಈ ದಂಧೆಯನ್ನು ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಿಷ್ಠಗೊಳಿಸುವ ಮೂಲಕ ತಡೆಗಟ್ಟಬೇಕು’ ಎಂದು ಸಲಹೆ ನೀಡಿದರು. 

ಹಿರಿಯ ಮನೋರೋಗ ತಜ್ಞ ಡಾ. ಸಿ.ಆರ್. ಚಂದ್ರಶೇಖರ್, ‘ಡ್ರಗ್ಸ್‌ ವ್ಯಾಮೋಹಕ್ಕೆ ತುತ್ತಾದವರು, ಒತ್ತಡಕ್ಕೆ ಒಳಗಾಗುತ್ತಾರೆ. ಅದು ಸಿಗದೇ ಇದ್ದಾಗ ತಮ್ಮ ಮೇಲೆಯೇ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಇಂತಹ ಚಟ ಕಲಿಸುವವರಿಂದ ದೂರ ಉಳಿಯಬೇಕು. ವ್ಯಸನಿಗಳಿಗೆ ನಿಯಮಿತವಾಗಿ ಆಪ್ತ ಸಮಾಲೋಚನೆ ನಡೆಸಬೇಕು’ ಎಂದು ಹೇಳಿದರು. 

ಸಂಘಟನೆಯ ಕೆ.ಎಸ್. ವಿಮಲಾ, ‘ಡ್ರಗ್ಸ್‌ ಜಾಲದಲ್ಲಿ ಯಾರೇ ಇದ್ದರೂ ತಪ್ಪು. ಆದರೆ, ಅಪರಾಧವನ್ನು ಸಾಬೀತು ಮಾಡುವ ದಾರಿಯು ತಾಳ ತಪ್ಪುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ’ ಎಂದು ಹೇಳಿದರು. 

ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ್ ಹೊಸೂರು, ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಎಸ್. ಶಂಕರಪ್ಪ ಚರ್ಚೆಯಲ್ಲಿ ಪಾಲ್ಗೊಂಡರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು