ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಮಾರಾಟ: ಐದು ಮಂದಿ ಬಂಧನ, ₹30 ಲಕ್ಷ ಮೌಲ್ಯದ ಮಾದಕ ಡ್ರಗ್ಸ್‌ ಜಪ್ತಿ

₹30 ಲಕ್ಷ ಮೌಲ್ಯದ ಮಾದಕ ಡ್ರಗ್ಸ್‌ ಜಪ್ತಿ
Last Updated 23 ಜೂನ್ 2021, 15:00 IST
ಅಕ್ಷರ ಗಾತ್ರ

ಬೆಂಗಳೂರು: ಡಾರ್ಕ್‌ವೆಬ್‌ ಹಾಗೂ ಇನ್ನಿತರ ವೆಬ್‌ಸೈಟ್‌ಗಳಿಂದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ತರಿಸಿಕೊಂಡು, ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಟೆಕಿಗಳು, ಕಾನೂನು ವಿದ್ಯಾರ್ಥಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಭಾರತ್‌ನಗರದ ಪಿ.ಜಿ ಕಟ್ಟಡದಲ್ಲಿ ವಾಸವಿದ್ದರು. ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ, ಎಕ್ಸ್‌ಟೆಸಿ ಮಾತ್ರೆಗಳು, ಹ್ಯಾಶಿಷ್ ಉಂಡೆಗಳು ಹಾಗೂ ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳನ್ನು ಮಾರುತ್ತಿದ್ದರು. ಈ ಕುರಿತು ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಪೂರ್ಣ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

‘ಬಂಧಿತರಿಂದ ₹30 ಲಕ್ಷ ಮೌಲ್ಯದ 300 ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳು, 150 ಎಲ್‌ಎಸ್‌ಡಿ ಸ್ಟ್ರಿಪ್ಸ್‌, ಒಂದು ಕೆ.ಜಿ.ಗಾಂಜಾ, ಐದು ಮೊಬೈಲ್‌ಗಳು, ತೂಕದ ಯಂತ್ರ ಹಾಗೂ ಒಂದು ಬೈಕ್‌ ಜಪ್ತಿ ಮಾಡಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದುಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಬಂಧಿತರ ಪೈಕಿ ಇಬ್ಬರು ನಗರದ ಐಟಿ ಕಂಪನಿಯ ಉದ್ಯೋಗಿಗಳು. ಹೆಚ್ಚು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ತಮ್ಮ ಸಹೋದ್ಯೋಗಿಗಳಿಗೆ,‘ಮಾದಕ ವಸ್ತುಗಳ ಸೇವನೆಯಿಂದ ಚೆನ್ನಾಗಿ ಕೆಲಸ ಮಾಡಬಹುದು’ ಎಂದು ಉತ್ತೇಜಿಸುತ್ತಿದ್ದರು. ಮತ್ತೊಬ್ಬ ಆರೋಪಿ ನಗರದ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಈ ಜಾಲದಲ್ಲಿ ಸಕ್ರಿಯನಾಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಡಾರ್ಕ್‌ವೆಬ್‌ ಹಾಗೂ ಇತರ ವೆಬ್‌ಸೈಟ್‌ಗಳಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದರು. ಅವರಿಗೆ ಬಿಟ್‌ಕಾಯಿನ್ ಪಾವತಿಸಿ, ವಿದೇಶಗಳಿಂದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು’.

‘ಅಧಿಕಾರಿಗಳಿಗೆ ತಿಳಿಯದಂತೆ ಮಾದಕ ವಸ್ತುಗಳನ್ನು ಅಮೆಜಾನ್‌ ಪ್ಯಾಕ್‌ಗಳಲ್ಲಿ ತುಂಬಿ, ಸೀಲ್‌ನೊಂದಿಗೆ ಪ್ಯಾಕ್‌ ಮಾಡುತ್ತಿದ್ದರು. ‘ಡುನ್‌ಝೋ’ ಮುಖಾಂತರ ಡೆಲಿವರಿ ಸಿಬ್ಬಂದಿಯ ಸೋಗಿನಲ್ಲಿ ತೆರಳಿ, ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದರು. ಬಳಿಕ ಗ್ರಾಹಕರಿಗೆ ತಲುಪಿಸಿ, ಆನ್‌ಲೈನ್‌ ಪಾವತಿ ಮಾಡಿಸಿಕೊಳ್ಳುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT