ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಗ್ಸ್’ ಪಾರ್ಟಿಯಲ್ಲಿ ತೆಲಂಗಾಣ ಶಾಸಕರು ?

₹ 4 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಪ್ರಕರಣ
Last Updated 3 ಏಪ್ರಿಲ್ 2021, 17:52 IST
ಅಕ್ಷರ ಗಾತ್ರ

ಬೆಂಗಳೂರು: ₹ 4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲಾದ ನಿರ್ಮಾಪಕ ಶಂಕರಗೌಡ ಹಾಗೂ ಇತರರು ನಗರದಲ್ಲಿ ನಡೆಸುತ್ತಿದ್ದ ಪಾರ್ಟಿಗಳಲ್ಲಿ ತೆಲಂಗಾಣದ ನಾಲ್ವರು ಶಾಸಕರು ಪಾಲ್ಗೊಳ್ಳುತ್ತಿದ್ದ ಅನುಮಾನ ಪೂರ್ವ ವಿಭಾಗದ ಪೊಲೀಸರಿಗೆ ಬಂದಿದ್ದು, ಈ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿ ಹಲವರನ್ನು ಡ್ರಗ್ಸ್ ಸಮೇತ ಸೆರೆ ಹಿಡಿದಿದ್ದರು. ಡ್ರಗ್ಸ್ ಖರೀದಿಸಿ ಪಾರ್ಟಿಯಲ್ಲಿ ವಿತರಣೆ ಮಾಡುತ್ತಿದ್ದ ಆರೋಪದಡಿ, ‘ಕೆಂಪೇಗೌಡ’ ಸೇರಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದ ಶಂಕರಗೌಡ ಅವರನ್ನು ಬಂಧಿಸಿದ್ದರು. ತೆಲುಗು ನಟ ತನೀಶ್ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದರು.

ಶಾಸಕರ ವಿಷಯ ಬಾಯ್ಬಿಟ್ಟ ಉದ್ಯಮಿಗಳು: ‘ಶಂಕರಗೌಡ ಅವರಿಗೆ ಪರಿಚಯವಿದ್ದ ಹೈದರಾಬಾದ್‌ನ ಇಬ್ಬರು ಉದ್ಯಮಿಗಳು, ನಗರದಲ್ಲಿ ಪಬ್‌ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ. ಶಂಕರಗೌಡ ಅವರ ಹಲವು ಸಿನಿಮಾಗಳಿಗೆ ಉದ್ಯಮಿಗಳು ಫೈನಾನ್ಸ್ ಸಹ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಂಕರಗೌಡ ಜೊತೆ ಸೇರಿ ಉದ್ಯಮಿಗಳು ನಗರದಲ್ಲಿ ಹಲವು ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಅದೇ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಮಾಹಿತಿ ಸಿಕ್ಕಿತ್ತು. ಉದ್ಯಮಿಗಳಿಗೆ ನೋಟಿಸ್ ನೀಡಿ ಇತ್ತೀಚೆಗೆ ವಿಚಾರಣೆ ನಡೆಸಲಾಗಿದೆ. ತೆಲಂಗಾಣದ ನಾಲ್ವರು ಶಾಸಕರು ಹಾಗೂ ಸಿನಿಮಾ ತಾರೆಯರ ಹೆಸರುಗಳನ್ನು ಉದ್ಯಮಿಗಳು ಬಾಯ್ಬಿಟ್ಟಿದ್ದಾರೆ. ಅದರ ಖಚಿತತೆ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘ಬೆಂಗಳೂರಿನಲ್ಲಿ ಆಗಾಗ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಅದೇ ಪಾರ್ಟಿಗಳಿಗೆ ತೆಲಂಗಾಣದ ನಾಲ್ವರು ಶಾಸಕರು ಹಾಗೂ ಸಿನಿಮಾ ತಾರೆಯರು ಬರುತ್ತಿದ್ದರೆಂದು ಉದ್ಯಮಿಗಳು ಹೇಳಿಕೆ ನೀಡಿದ್ದಾರೆ. ವಿಚಾರಣೆ ನಡೆಸಿ ಅವರನ್ನು ವಾಪಸು ಕಳುಹಿಸಲಾಗಿದೆ. ಉದ್ಯಮಿಗಳ ಹೇಳಿಕೆ ಪರಿಶೀಲಿಸಲಾಗುತ್ತಿದ್ದು, ಕೆಲ ಗೊಂದಲಗಳು ಇವೆ. ಹೀಗಾಗಿ, ಪುನಃ ವಿಚಾರಣೆಗೆ ಬರುವಂತೆ ಅವರಿಗೆ ನೋಟಿಸ್‌ ನೀಡಲಾಗಿದೆ. ವಿಚಾರಣೆಗೆ ಹಾಜರಾದ ನಂತರ, ಶಾಸಕರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT