ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯದ ಅಮಲಿನಲ್ಲಿ ಗಲಾಟೆ: ವ್ಯಕ್ತಿ ಕೊಲೆ

Published 8 ಜುಲೈ 2024, 16:18 IST
Last Updated 8 ಜುಲೈ 2024, 16:18 IST
ಅಕ್ಷರ ಗಾತ್ರ

ಬೆಂಗಳೂರು: ಪಾರ್ಟಿ ನಡೆಸುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.

ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಪಾಳದ ಬಾಲಾಜಿ(43) ಕೊಲೆಯಾದ ವ್ಯಕ್ತಿ.

ನಿರ್ಮಾಣ ಹಂತದಲ್ಲಿರುವ ಕೊತ್ತನೂರು ಸಮುದಾಯ ಭವನ ಕಟ್ಟಡದಲ್ಲಿ ಭಾನುವಾರ ಮಧ್ಯರಾತ್ರಿ 12ರ ಸುಮಾರಿಗೆ ಕೃತ್ಯ ನಡೆದಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಕೊಲೆಯಾದ ಬಾಲಾಜಿ ದಿನಗೂಲಿ ಕೆಲಸಗಾರನಾಗಿದ್ದರು. ಹಲವು ವರ್ಷಗಳ ಹಿಂದೆ ಕುಟುಂಬದ ಸದಸ್ಯರ ಜತೆಗೆ ನಗರಕ್ಕೆ ಬಂದು ನೆಲೆಸಿದ್ದರು. ತಂದೆ–ತಾಯಿ ಕೊತ್ತನೂರಿನಲ್ಲಿ ನೆಲೆಸಿದ್ದರೆ, ಪತ್ನಿ ವರ್ತೂರಿನಲ್ಲಿ ನೆಲೆಸಿದ್ದಾರೆ. ಬಾಲಾಜಿ ಅವರಿಗೆ ಮದ್ಯ ಸೇವನೆಯ ಅಭ್ಯಾಸವಿತ್ತು. ರಾತ್ರಿ ಮನೆಗೆ ಬಾರದೆ ಕೊತ್ತನೂರು ಭಾಗದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕೊತ್ತನೂರಿನ ನಿರ್ಮಾಣ ಹಂತದ ಸಮುದಾಯ ಭವನದ ಕಟ್ಟಡದಲ್ಲಿ ಭಾನುವಾರ ರಾತ್ರಿ ಬಾಲಾಜಿ ಹಾಗೂ ಇಬ್ಬರು ಸ್ನೇಹಿತರು ಮದ್ಯದ ಪಾರ್ಟಿ ನಡೆಸುತ್ತಿದ್ದರು. ಈ ವೇಳೆ ಜಗಳ ನಡೆದಿದೆ. ಸ್ನೇಹಿತರಿಬ್ಬರು ಬಾಲಾಜಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕಿರುಚಾಟ ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಾಜಿ ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕೊಲೆಗೆ ಕಾರಣ ಗೊತ್ತಾಗಿಲ್ಲ. ಆರೋಪಿಗಳನ್ನು ಬಂಧಿಸಿದ ನಂತರ ಕಾರಣ ತಿಳಿಯಲಿದೆ. ಕೃತ್ಯ ಎಸಗಿದವರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ’ ಎಂದು ಪೊಲೀಸರು ಹೇಳಿದರು.

ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT