ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಮೊಡೆರಾಟೊ ವ್ಯವಸ್ಥೆ

28 ವೃತ್ತಗಳಲ್ಲಿ ಪ್ರಾಯೋಗಿಕ ಜಾರಿ * ಜಪಾನ್‌ ಕಂಪನಿಗೆ ನಿರ್ವಹಣೆ ಹೊಣೆ * ದೇಶದಲ್ಲೇ ಮೊದಲ ಪ್ರಯತ್ನ
Published 26 ಆಗಸ್ಟ್ 2023, 23:54 IST
Last Updated 26 ಆಗಸ್ಟ್ 2023, 23:54 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರ ಭೂ ಸಾರಿಗೆ ನಿರ್ದೇಶನಾಲಯ, ದೇಶದಲ್ಲಿ ಮೊದಲ ಬಾರಿಗೆ ಸ್ವಯಂಚಾಲಿತ ಸಿಗ್ನಲ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ತಯಾರಿ ಆರಂಭಿಸಿದೆ.

ಬೆಂಗಳೂರು, ದಟ್ಟಣೆ ನಗರಿಯಾಗಿ ಮಾರ್ಪಟ್ಟಿದೆ. ಹೊರವರ್ತುಲ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ದಟ್ಟಣೆ ಸಾಮಾನ್ಯವಾಗಿದೆ. ನಿತ್ಯದ ಕೆಲಸಕ್ಕೆ ಹೋಗುವ ಜನ, ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ನಗರದ ಹಲವೆಡೆ ಸಿಗ್ನಲ್‌ಗಳ ಅಸಮರ್ಪಕ ನಿರ್ವಹಣೆಯೂ ದಟ್ಟಣೆಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ವೃತ್ತಗಳಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಜಾರಿಗೊಳಿಸಲು ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಈಗಾಗಲೇ ಯೋಜನೆ ರೂಪಿಸಿದೆ.

ಜಪಾನ್‌ನಲ್ಲಿ ಬಳಕೆಯಲ್ಲಿರುವ ‘ವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ (ಮೊಡೆರಾಟೊ)’ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲು ಸಿದ್ಧತೆ ಆರಂಭವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ‘ಮೊಡೆರಾಟೊ’  ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.

‘ನಗರದ ದಟ್ಟಣೆಗೆ ಪ್ರಮುಖ ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಸಿಗ್ನಲ್‌ಗಳ ಅಸಮರ್ಪಕ ನಿರ್ವಹಣೆಯಿಂದ ದಟ್ಟಣೆ ಉಂಟಾಗುತ್ತಿರುವುದು ಕಂಡುಬಂದಿತ್ತು. ಹೀಗಾಗಿ, ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಿಂದ ದಟ್ಟಣೆ ತಗ್ಗಿಸಲು ಯೋಜನೆ ರೂಪಿಸಲಾಗಿದೆ’ ಎಂದು ಡಲ್ಟ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಮೊಡೆರಾಟೊ’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಲಾಭವೇನು ? ಕಾರ್ಯನಿರ್ವಹಣೆ ಹೇಗೆ ? ನಗರದಲ್ಲಿ ಈ ವ್ಯವಸ್ಥೆ ಫಲಕಾರಿಯಾಗುತ್ತದೆಯೇ ? ಎಂಬಿತ್ಯಾದಿ ಪ್ರಶ್ನೆಗಳಿವೆ. ಹೀಗಾಗಿ, ನಗರದ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) 28 ವೃತ್ತಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ’ ಎಂದರು.

ನೂತನ ಸಿಗ್ನಲ್‌ಗಳ ಅಳವಡಿಕೆ: 28 ವೃತ್ತಗಳಲ್ಲಿ ಮೊಡೆರಾಟೊ ವ್ಯವಸ್ಥೆ ಅಳವಡಿಸಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಜಪಾನ್‌ನ ನಗೋಯಾ ಎಲೆಕ್ಟ್ರಿಕ್ ವರ್ಕ್ಸ್ ಕಂಪನಿಗೆ ವಹಿಸಲಾಗಿದೆ. ಕಂಪನಿ ಅಧಿಕಾರಿಗಳು, ಸ್ಥಳೀಯ ಕಾರ್ಮಿಕರ ಸಹಾಯದಿಂದ ಈಗಾಗಲೇ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ.

ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಗ್ನಲ್‌ಗಳ ಬಳಿಯೇ ನೂತನ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ, ಸಿಗ್ನಲ್‌ಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಳೆಯುವ ಸೆನ್ಸಾರ್ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಸದ್ಯ ವಸ್ತ್ರದಿಂದ ಮುಚ್ಚಲಾಗಿದೆ. ಕೆಲ ವೃತ್ತಗಳಲ್ಲಿ ಸಿಗ್ನಲ್ ಹಾಗೂ ಸೆನ್ಸಾರ್ ಉಪಕರಣ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ.

482 ವೃತ್ತಗಳಲ್ಲಿ ಮೊಡೆರಾಟೊ ವ್ಯವಸ್ಥೆ: ‘ನಗರದಲ್ಲಿ 40 ಸಾವಿರ ವೃತ್ತಗಳಿದ್ದು, 888 ವೃತ್ತಗಳಲ್ಲಿ ಸಿಗ್ನಲ್‌ ವ್ಯವಸ್ಥೆ ಇದೆ. 388 ವೃತ್ತಗಳಲ್ಲಿ ಸಮಯ ಆಧರಿತ ಸಿಗ್ನಲ್‌ಗಳಿದ್ದು, 500 ವೃತ್ತಗಳಲ್ಲಿ ಸಿಬ್ಬಂದಿಯೇ ಸಿಗ್ನಲ್‌ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಮುಖವಾಗಿರುವ 482 ವೃತ್ತಗಳಲ್ಲಿ ಮೊಡೆರಾಟೊ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದರು.

‘28 ವೃತ್ತಗಳಲ್ಲಿ ಮೊಡೆರಾಟೊ ವ್ಯವಸ್ಥೆಯ ಪ್ರಾಯೋಗಿಕ ಜಾರಿಗೆ ಒಪ್ಪಿಗೆ ಸಿಕ್ಕಿದೆ. ಉಳಿದ ವೃತ್ತಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಹಂತ ಹಂತವಾಗಿ ನಡೆಯಲಿದೆ’ ಎಂದರು.

ನಗರದ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಲ್ಲಿ ಅಳವಡಿಸಿರುವ ಮೊಡೆರಾಟೊ ವ್ಯವಸ್ಥೆಯ ಸಿಗ್ನಲ್‌ – ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.
ನಗರದ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಲ್ಲಿ ಅಳವಡಿಸಿರುವ ಮೊಡೆರಾಟೊ ವ್ಯವಸ್ಥೆಯ ಸಿಗ್ನಲ್‌ – ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.

ಮೊಡೆರಾಟೊ ಕಾರ್ಯನಿರ್ವಹಣೆ ಹೇಗೆ ?

‘ಸಿಗ್ನಲ್‌ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಸಿಗ್ನಲ್‌ ನಿರ್ವಹಣೆ ಮಾಡುವ ತಂತ್ರಜ್ಞಾನವೇ ಮೊಡೆರಾಟೊ. ಇದು ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸಲಿದೆ’ ಎಂದು ಡಲ್ಟ್ ಅಧಿಕಾರಿಯೊಬ್ಬರು ಹೇಳಿದರು. ‘ವೃತ್ತಗಳಿಗೆ ಹೊಂದಿಕೊಂಡಿರುವ ಎಲ್ಲ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆಯನ್ನು ಸೆನ್ಸಾರ್ ಮೂಲಕ ಮೊಡೆರಾಟೊ ವ್ಯವಸ್ಥೆ ಗ್ರಹಿಸಲಿದೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ಇವೆಯೋ ಅಂಥ ವಾಹನಗಳನ್ನು ‘ಹಸಿರು’ ಸಿಗ್ನಲ್‌ ನೀಡಿ ಮುಂದಕ್ಕೆ ಕಳುಹಿಸಲಿದೆ. ನಿಗದಿತ ಸಮಯಕ್ಕೂ ಮೊದಲೇ ರಸ್ತೆ ಖಾಲಿಯಾದರೆ ‘ಕೆಂಪು’ ಸಿಗ್ನಲ್‌ ನೀಡಿ ಬೇರೆ ರಸ್ತೆಯಲ್ಲಿರುವ ವಾಹನಗಳ ಸಂಚಾರಕ್ಕೆ ‘ಹಸಿರು’ ಸಿಗ್ನಲ್‌ ನೀಡಲಿದೆ’ ಎಂದು ಅಧಿಕಾರಿ ವಿವರಿಸಿದರು.  ‘ಕೇವಲ ಒಂದೇ ವೃತ್ತದ ವಾಹನಗಳ ದಟ್ಟಣೆಯನ್ನು ಈ ವ್ಯವಸ್ಥೆ ಅಳೆಯುವುದಿಲ್ಲ. ಬದಲಿಗೆ ಅಕ್ಕ–ಪಕ್ಕದಲ್ಲಿರುವ ವೃತ್ತಗಳ ವಾಹನ ದಟ್ಟಣೆ ಬಗ್ಗೆಯೂ ಗ್ರಹಿಸಲಿದೆ. ಒಂದು ವೃತ್ತದ ದಟ್ಟಣೆಯಿಂದ ಮತ್ತೊಂದು ವೃತ್ತದ ದಟ್ಟಣೆ ಮೇಲೆ ಪರಿಣಾಮ ಬೀರದಂತೆ ಸಿಗ್ನಲ್‌ಗಳ ನಿರ್ವಹಣೆ ಮಾಡಲಿದೆ. ಹೀಗಾಗಿ ದಟ್ಟಣೆ ನಿಯಂತ್ರಣಕ್ಕೆ ಬರುವ ಭರವಸೆ ಇದೆ’ ಎಂದು ಹೇಳಿದರು.

‘ಬಹುದಿನಗಳ ಕನಸು’

ನಗರದ ದಟ್ಟಣೆಗೆ ಪರಿಹಾರ ಕಂಡುಹಿಡಿಯುವ ಪರ್ಯಾಯ ವ್ಯವಸ್ಥೆಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಜಪಾನ್‌ನ ಮೊಡೆರಾಟೊ ವ್ಯವಸ್ಥೆ ಬಗ್ಗೆ ತಿಳಿಯುತ್ತಿದ್ದಂತೆ 2014ರಲ್ಲಿ ಯೋಜನೆಯ ಪ್ರಸ್ತಾವ ಸಿದ್ಧಪಡಿಸಲಾಗಿತ್ತು’ ಎಂದು ಡಲ್ಟ್ ಅಧಿಕಾರಿಯೊಬ್ಬರು ಹೇಳಿದರು. ‘ಯೋಜನೆ ಕೆಲ ವರ್ಷ ನೆನೆಗುದಿಗೆ ಬಿದ್ದಿತ್ತು. 2021ರ ಜುಲೈನಲ್ಲಿ ಪ್ರಸ್ತಾವಕ್ಕೆ ಮರುಜೀವ ಸಿಕ್ಕಿತು. ಇದಾದ ನಂತರ 2022ರಲ್ಲಿ ಯೋಜನೆ ಜಾರಿಯಾಗಬೇಕಿತ್ತು. ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಇದೀಗ ಯೋಜನೆ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಆಂಬುಲೆನ್ಸ್‌ಗೆ ದಾರಿ ಸದ್ಯಕ್ಕಿಲ್ಲ’

‘ಮೊಡೆರಾಟೊ ವ್ಯವಸ್ಥೆಯು ಎಲ್ಲ ವಾಹನಗಳನ್ನು ಸಮಾನ ದೃಷ್ಟಿಯಿಂದ ಅಳೆಯುತ್ತದೆ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವುದು ಹಾಗೂ ಅಕ್ಕ–ಪಕ್ಕದ ರಸ್ತೆಗಳಲ್ಲಿ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳುವುದು ಈ ವ್ಯವಸ್ಥೆ ಉದ್ದೇಶ. ಹೀಗಾಗಿ ಆಂಬುಲೆನ್ಸ್‌ ಬಂದಾಗ ದಾರಿ ಮಾಡಿಕೊಡುವ ವ್ಯವಸ್ಥೆ ಸದ್ಯಕ್ಕಿಲ್ಲ. ಸಿಬ್ಬಂದಿಯೇ ಸಿಗ್ನಲ್ ನಿರ್ವಹಣೆ ಮಾಡಿ ದಾರಿ ಮಾಡಿಕೊಡಬೇಕು’ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT