ಶುಕ್ರವಾರ, ಸೆಪ್ಟೆಂಬರ್ 24, 2021
24 °C
ರೋಟರಿ ರಾಜ್ ಮಹಲ್ ವಿಲಾಸ್‌ ಕ್ಲಬ್‌ನಿಂದ 2 ಇ–ವಾಹನ ದೇಣಿಗೆ

ಸಂಜಯ್ ನಗರ ಪಿಎಚ್‌ಸಿಗೆ ‘ಇ-ಸಂಜೀವಿನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈದ್ಯಕೀಯ ಸೇವೆಯನ್ನು ತ್ವರಿತವಾಗಿ ತಲುಪಿಸಲು ನೆರವಾಗುವ ಉದ್ದೇಶದಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಸಿಬ್ಬಂದಿಗೆ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ಒದಗಿಸುವ ‘ಇ-ಸಂಜೀವಿನಿ' ಕಾರ್ಯಕ್ರಮವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಸಂಜಯ್ ನಗರ ವಾರ್ಡ್‌ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಟರಿ ರಾಜ್ ಮಹಲ್ ವಿಲಾಸ್‌ ಕ್ಲಬ್‌ ಎರಡು ಪರಿಸರ ಸ್ನೇಹಿ ದ್ವಿಚಕ್ರ ವಾಹನಗಳನ್ನು ಕೊಡುಗೆ ನೀಡಿದೆ.

ವಾಹನಗಳನ್ನು ಸ್ವೀಕರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ವೈದ್ಯಕೀಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಇ–ವಾಹನಗಳು ನೆರವಾಗಲಿವೆ’ ಎಂದರು.

‘ಪಿಎಚ್‌ಸಿಯ ಸಿಬ್ಬಂದಿ, ಕಿರಿಯ ಆರೋಗ್ಯ ಸಹಾಯಕಿಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಲಸಿಕೆ ಕಾರ್ಯಕ್ರಮ, ವಿಶೇಷ ಆರೋಗ್ಯ ಶಿಬಿರ, ಪೌಷ್ಟಿಕ ಕಾರ್ಯಕ್ರಮ, ಅಂಗನವಾಡಿ ತಪಾಸಣೆ, ಲಸಿಕೆ ಹಾಕುವುದು, ಕೊಳಗೇರಿ ಪ್ರದೇಶಗಳ ಭೇಟಿ, ಸಮೀಕ್ಷೆ ನಡೆಸಲು ಈ ದ್ವಿಚಕ್ರ ವಾಹನಗಳನ್ನು ಬಳಸಲಿದ್ದಾರೆ. ಈ ಯೋಜನೆ ಯಶಸ್ವಿಯಾದರೆ ಇತರ ವಾರ್ಡ್‌ಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್, ‘ವಿದ್ಯುತ್‌ ಚಾಲಿತ ವಾಹನಗಳ ನಿರ್ವಹಣೆಗೆ ಹೆಚ್ಚುವರಿ ವೆಚ್ಚವಾಗುವುದಿಲ್ಲ. ಈ ವಾಹನಗಳನ್ನು ಪಿಎಚ್‌ಸಿಗಳಲ್ಲೇ ಚಾರ್ಜ್‌ ಮಾಡಬಹುದು. ಇಂತಹ ವಾಹನಗಳನ್ನು ಬಿಬಿಎಂಪಿ ವತಿಯಿಂದ ಖರೀದಿ ಮಾಡಿ ಪಿಎಚ್‌ಸಿಗಳಿಗೆ ವಿತರಿಸುವ ಚಿಂತನೆ ಇದೆ’ ಎಂದರು.

ಶಾಸಕ ಭೈರತಿ ಸುರೇಶ್, ‘ಕೋವಿಡ್ ಸಮಯದಲ್ಲಿ ರೋಟರಿ ಕ್ಲಬ್ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಪಾಲಿಕೆಯ ಜೊತೆ ಕೈಜೋಡಿಸಿದೆ. ಈ ಪ್ರದೇಶದಲ್ಲಿ ಸೋಂಕು ನಿಯಂತ್ರಿಸಲು ನೆರವಾಗುತ್ತಿದೆ’ ಎಂದರು.

ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ಜೈನ್, ಆರೋಗ್ಯ ವೈದ್ಯಾಧಿಕಾರಿ ಡಾ. ವೇದಾ, ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3190ರ ಗವರ್ನರ್‌ ಡಾ. ಫಝಲ್ ಮುಹಮೂದ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು