ಗುರುವಾರ , ಜೂನ್ 30, 2022
25 °C

ಆರ್ಥಿಕ ಪ್ಯಾಕೇಜ್‌: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಆನ್‌ಲೈನ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ನಿಂದ ತೀವ್ರ ಸಂಕಷ್ಟದಲ್ಲಿರುವ ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ ಗುರುವಾರ ಆನ್‍ಲೈನ್ ಪ್ರತಿಭಟನೆ ನಡೆಯಿತು.

ಬೇಡಿಕೆಗಳನ್ನು ಈಡೇರಿಸುವಂತೆ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಮನೆಯಲ್ಲೇ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಆನ್‍ಲೈನ್ ಚಳುವಳಿಯಲ್ಲಿ ಭಾಗವಹಿಸಿದರು.

‘ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ, ಉಪನ್ಯಾಸಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು, ಉದ್ಯೋಗದಿಂದ ವಜಾಗೊಳಿಸದಂತೆ ಮತ್ತು ವೇತನ ಕಡಿತ ಮಾಡದಂತೆ ಆದೇಶ ಹೊರಡಿಸಿ, ಅದು ಜಾರಿ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸರ್ಕಾರವನ್ನು ಪ್ರತಿಭಟನೆನಿರತರು ಆಗ್ರಹಿಸಿದರು.

‘ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಶಿಕ್ಷಕ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ ಗೌರವದಿಂದ ಬದುಕು ಸಾಗಿಸುತ್ತಿದ್ದ ಈ ವರ್ಗಕ್ಕೆ ಅನಿಶ್ಚಿತತೆ ಆವರಿಸಿದೆ. 14 ತಿಂಗಳುಗಳಿಂದ ಸಂಬಳ ಇಲ್ಲದೆ, ಬೇರೆ ಉದ್ಯೋಗವೂ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ಕೆಲವರು ತರಕಾರಿ, ಹಣ್ಣು ಮಾರುವ ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುದ ದಯನೀಯ ಪರಿಸ್ಥಿತಿ ಬಂದಿದೆ. ಕೆಲವರು ಆರ್ಥಿಕ ಹೊರೆ ತಾಳಲಾಗದೆ, ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

‘ಶಾಲಾ –ಕಾಲೇಜುಗಳು ನಡೆಯುತ್ತಿಲ್ಲವೆಂಬ ನೆಪವೊಡ್ಡಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಡೊನೇಷನ್ ಬಂದಿಲ್ಲವೆಂದು ಫೆಬ್ರವರಿ ತಿಂಗಳಿನಿಂದ ನೀಡಬೇಕಾದ ಸಂಬಳವನ್ನೂ ನೀಡಿಲ್ಲ. ಕೆಲಸದಿಂದ ತೆಗೆದುಹಾಕಬಾರದೆಂದು ಸರ್ಕಾರ ಹೇಳಿದ್ದರೂ, ಅದಕ್ಕೆ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕದಂತೆ ಸರ್ಕಾರ ತಕ್ಷಣ ಸ್ಪಷ್ಟ ಆದೇಶ ಹೊರಡಿಸಬೇಕು. ಈ ಆದೇಶವನ್ನು ಉಲ್ಲಂಘಿಸದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು