ಬೆಂಗಳೂರು: ಬಿಬಿಎಂಪಿ ಎಂಜಿನಿಯರ್ ಸೇರಿದಂತೆ ಯಾವ ಸಿಬ್ಬಂದಿಗೂ ಚುನಾವಣೆ ಕೆಲಸ ಹೆಚ್ಚುವರಿಯಾಗುವುದಿಲ್ಲ. ಹೊಸ ಕಾಮಗಾರಿಗಳು ಆರಂಭವಾಗದಿರುವುದರಿಂದ ಆ ಸಮಯವನ್ನು ಚುನಾವಣೆ ಕೆಲಸಕ್ಕೆ ನೀಡಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಹೊಸ ಟೆಂಡರ್, ಹೊಸ ಕಾರ್ಯಾದೇಶ, ಹೊಸದಾಗಿ ಕೆಲಸ ಆರಂಭಿಸುವಂತಿಲ್ಲ. ಹೀಗಾಗಿ, ಇದಕ್ಕಾಗಿ ಎಂಜಿನಿಯರ್‌ಗಳು ಸಾಕಷ್ಟು ಸಮಯವನ್ನು ನೀಡುತ್ತಿದ್ದರು. ಇದೀಗ ಆ ಕೆಲಸ ಇಲ್ಲದಿರುವುದರಿಂದ ಈಗಿರುವ ಕೆಲಸ ಜೊತೆಗೇ ಚುನಾವಣೆ ಕೆಲಸವನ್ನೂ ಮಾಡಬಹುದು ಎಂದು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ನಿರ್ವಹಣೆಯ ಜವಾಬ್ದಾರಿಯನ್ನು ಈ ಹಿಂದೆ ಎಂಜಿನಿಯರ್‌ಗಳಿಗೆ ನೀಡಲಾಗುತ್ತಿತ್ತು. ಕಾಮಗಾರಿ ಕೆಲಸ ಮಾಡುವುದೂ ಅವರೇ, ನೀತಿ ಸಂಹಿತೆ ನಿರ್ವಹಣೆ ಅವರದ್ದೇ ಆದರೆ ಸರಿಯಾಗುವುದಿಲ್ಲ ಎಂದು ಈ ಬಾರಿ ಕೆಎಎಸ್ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ರಾಜಕಾಲುವೆ ವಿಭಾಗದ ಯಾವ ಸಿಬ್ಬಂದಿಗೂ ಚುನಾವಣೆ ಕೆಲಸ ನೀಡಲಾಗಿಲ್ಲ. ಹೀಗಾಗಿ ಅವರು ಮಳೆ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವ ಕೆಲಸ ನಿರ್ವಹಿಸಲಿದ್ದಾರೆ. ರಾಜಕಾಲುವೆ ನಿರ್ಮಾಣ ಕಾರ್ಯವೂ ತುರ್ತಾಗಿ ಆಗಲಿದೆ ಎಂದು ತಿಳಿಸಿದರು.
‘ಮಾಹಿತಿ ಸಂಗ್ರಹಿಸಿದರೆ ಕ್ರಮ’
‘ಯಾವುದೇ ಪಕ್ಷ, ಅಭ್ಯರ್ಥಿ ಸೇರಿದಂತೆ ಯಾರೂ ನಾಗರಿಕರ ಮಾಹಿತಿ ಸಂಗ್ರಹಿಸಲು ಅವಕಾಶ ಇಲ್ಲ. ಇಂತಹ ಕೆಲಸ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
‘ನಗರದ ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಸ್ಥಳದಲ್ಲಿ ಸಂಸ್ಥೆ, ಕಂಪನಿ ಒಳಗೊಂಡಂತೆ ಯಾರೂ ನಾಗರಿಕರಿಂದ ಮೊಬೈಲ್ ಸಂಖ್ಯೆ ಸೇರಿ ಯಾವ ಮಾಹಿತಿಯನ್ನೂ ಸಂಗ್ರಹಿಸುವಂತಿಲ್ಲ. ಮಹದೇವಪುರ ವ್ಯಾಪ್ತಿಯಲ್ಲಿ ಇಂತಹ ಪ್ರಕರಣವಾಗಿರುವ ಮಾಹಿತಿ ಇದ್ದು, ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.