ಒಂದೇ ದಿನ 900ಕ್ಕೂ ಹೆಚ್ಚು ಚಾಲನಾ ಪರವಾನಗಿ ವಿತರಣೆ: ಎಆರ್‌ಟಿಒ ಅಮಾನತು

ಬೆಂಗಳೂರು: ಒಂದೇ ದಿನ 900ಕ್ಕೂ ಹೆಚ್ಚು ಚಾಲನಾ ಪರವಾನಗಿ ವಿತರಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಪಿ.ಕೃಷ್ಣಾನಂದ ಅವರನ್ನು ಅಮಾನತು ಮಾಡಲಾಗಿದೆ.
‘ಈ ಕುರಿತು ಜಂಟಿ ಆಯುಕ್ತರು ಪರಿಶೀಲನೆ ನಡೆಸಿದ್ದರು. ಅಕ್ರಮ ವಿತರಣೆ ಸಾಬೀತಾಗಿದ್ದು, ಎಆರ್‌ಟಿಒ ಅಮಾನತು ಮಾಡಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕಚೇರಿಯಲ್ಲಿ ಮೂವರು ಬ್ರೇಕ್ ಇನ್‌ಸ್ಪೆಕ್ಟರ್‌ಗಳಿದ್ದಾರೆ. ಕಚೇರಿಯ ಪರೀಕ್ಷಾ ಅಂಕಣದಲ್ಲಿ ಚಾಲನಾ ಸಾಮರ್ಥ್ಯ ಪ್ರದರ್ಶಿಸಲು ಇರುವ ಅವಕಾಶದಂತೆ ಪ್ರತಿಯೊಬ್ಬ ಇನ್‌ಸ್ಪೆಕ್ಟರ್ ಕಾರು ಮತ್ತು ಬೈಕ್ ಸೇರಿ ದಿನಕ್ಕೆ ಗರಿಷ್ಠ 100 ಚಾಲನಾ ಪರವಾನಗಿ ನೀಡಿದರೂ, 300 ದಾಟಲು ಸಾಧ್ಯವಾಗದು. ಹೀಗಿದ್ದರೂ, 900 ಪರವಾನಗಿ ವಿತರಿಸಿದ್ದಾರೆ. ಇದು ಅಸಾಧ್ಯ.
ಬೆಂಗಳೂರಿನ ಇತರೆ ಕಚೇರಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಕೆ.ಆರ್.ಪುರಂ, ಸೇರಿದಂತೆ ಹಲವು ಕಚೇರಿಗಳಿಗೆ, ಏಳು ಬ್ರೇಕ್ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಕೆಲವರು ಸಮಂಜಸ ಉತ್ತರ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪರೀಕ್ಷೆ ನಡೆಸದೇ ಪರವಾನಗಿ ನೀಡಿದ್ದಾರೆ. ಹಾಗಾಗಿ, ಡಿಎಲ್ ವಿಭಾಗದ ಮುಖ್ಯಸ್ಥರಾಗಿದ್ದ ಕೃಷ್ಣಾನಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.