ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡೆಯದ ಪ್ರವೇಶ ಅನುಮತಿ: ಲಕ್ಷಾಂತರ ಎಂಜಿನಿಯರ್‌ಗಳ ಪದವಿಗೆ ಕುತ್ತು?

Last Updated 16 ಜುಲೈ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: 2010ರಿಂದ 2014ರ ನಡುವೆ ರಾಜ್ಯ ಸರ್ಕಾರದಿಂದ ‘ಪ್ರವೇಶ ಅನುಮತಿ’ ಪಡೆಯದ 50ಕ್ಕೂ ಅಧಿಕ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರಅಭ್ಯರ್ಥಿಗಳು ತಮ್ಮ ಪದವಿ ಪ್ರಮಾಣಪತ್ರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಒಳಪಟ್ಟ ಈ ಕಾಲೇಜುಗಳು ಇದೀಗ ಪೂರ್ವಾನ್ವಯವಾಗುವಂತೆ ಅನುಮತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿವೆ. ಕೆಲವು ವರ್ಷಗಳ ಹಿಂದೆ ಇದರಲ್ಲಿ ಕೆಲವು ಕಾಲೇಜುಗಳು ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೂ ಪತ್ರ ಬರೆದಿದ್ದವು. ಆದರೆ ಇದು ‘ಕಾನೂನುಬಾಹಿರ’ ಎಂಬ ನೆಲೆಯಲ್ಲಿ ನಿರಾಕರಿಸಿದ್ದರು.

ಇದೀಗ ಮತ್ತೆ ಈ ಕಾಲೇಜುಗಳು ಸರ್ಕಾರವನ್ನು ಒಟ್ಟಾಗಿ ಒತ್ತಾಯಿಸತೊಡಗಿದ್ದು, ಈ ವಿವಾದದ ಬಗ್ಗೆ ಗಮನ ಹರಿಸಲುಉನ್ನತ ಶಿಕ್ಷಣ ಇಲಾಖೆ ಹೊಸ ಸಮಿತಿಯೊಂದನ್ನು ರಚಿಸಿದೆ.

ಎಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಸೀಟು ಹೆಚ್ಚಳಕ್ಕ ಅಥವಾ ಹೊಸ ಕೋರ್ಸ್ ಆರಂಭಕ್ಕೆ ರಾಜ್ಯದ ಅಧಿಕೃತ ಒಪ್ಪಿಗೆ ಪಡೆಯದೆ ಇರುವಾಗ, ಇಂತಹ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ವಿಟಿಯು ಅನುಮತಿ ನೀಡಿದ್ದಾದರೂ ಹೇಗೆ ಎಂಬ ವಿವಾದ ಇದೀಗ ಗರಿಗೆದರಿದೆ.

ಈ ಸಮಿತಿಗೆ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಮುಖ್ಯಸ್ಥರಾಗಿದ್ದು, ವಿಟಿಯು ನಿವೃತ್ತ ಕುಲಪತಿ ಪ್ರೊ.ಎಚ್‌.ಪಿ.ಖಿಂಚಾ ಸದಸ್ಯರಾಗಿದ್ದಾರೆ.

‘ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕು ನಿವಾರಿಸುವ ಸಲುವಾಗಿ ಈ ಸಮಿತಿ ರಚಿಸಲಾಗಿದ್ದು, ಅದು ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಿಯಮ ಏನು: ಪ್ರತಿ ವರ್ಷ ಹೊಸ ಕೋರ್ಸ್‌ ಆರಂಭಿಸುವುದಾದರೆ ಅಥವಾ ಸೀಟುಗಳನ್ನು ಹೆಚ್ಚಿಸುವುದಾದರೆ ಕಾಲೇಜುಗಳು ವಿಟಿಯುಗೆ ಅರ್ಜಿ ಸಲ್ಲಿಸಬೇಕು. ಸ್ಥಳೀಯ ಪರೀಕ್ಷಾ ಸಮಿತಿ (ಎಲ್‌ಐಸಿ) ಕಾಲೇಜಿಗೆ ಭೇಟಿ ನೀಡಿ, ಅನುಮತಿಗಾಗಿ ಸೆನೆಟ್‌ ಮತ್ತು ಶೈಕ್ಷಣಿಕ ಮಂಡಳಿಗೆ ವರದಿ ಸಲ್ಲಿಸಬೇಕು. ಅಂತಿಮ ಒಪ್ಪಿಗೆಗಾಗಿ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT