ಬೆಂಗಳೂರು: ‘ಸಮಾಜದಲ್ಲಿ ಜಾತೀಯ ವಿಷಬೀಜಗಳು ಹೆಚ್ಚಾಗುತ್ತಿರುವಾಗ, ವಚನಗಳು ಸಂಜೀವಿನಿಯಾಗಿ ನಮ್ಮನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಿವೆ’ ಎಂದು ಶಿಕ್ಷಣ ತಜ್ಯ ಸೂಡಿ ಸುರೇಶ್ ಹೇಳಿದರು.
ವಚನಜ್ಯೋತಿ ಬಳಗ ಆಯೋಜನೆಯ ವಚನ ಶ್ರಾವಣದ 17ನೇ ದಿನ, ಮಾಗಡಿ ಮುಖ್ಯರಸ್ತೆಯ ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧಿಯವರ ಅಹಿಂಸೆ - ಸತ್ಯಾಗ್ರಹಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಸಮ ಸಮಾಜ ನಿರ್ಮಾಣ ತತ್ತ್ವಗಳನ್ನು ಒಂಬೈನೂರು ವರ್ಷಗಳ ಹಿಂದೆಯೇ ಪ್ರತಿಪಾದಿಸಿ ಆಚರಣೆಗೆ ತಂದ ನಿಜ ಮಹಾತ್ಮರು ಬಸವಣ್ಣ. ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನು ವಚನ ಚಳವಳಿಯಲ್ಲಿ ಅನುಷ್ಠಾನಕ್ಕೆ ತಂದ ಕೀರ್ತಿ ವಚನಕಾರರದು’ ಎಂದು ಬಣ್ಣಿಸಿದರು.
ಮಲ್ಲಿಕಾರ್ಜುನ ಗೌಡ ಮಾತನಾಡಿ, ‘ಜ್ಞಾನವನ್ನು ಹಂಚಿದ ವಚನಕಾರರು ತಮ್ಮ ಅನುಭಾವಗಳಲ್ಲಿ ಹಂಚಿರುವ ಭಾಷೆ ಇಂದಿನ ಆಧುನಿಕ ಕನ್ನಡಕ್ಕೂ ಮಿಗಿಲಾದ ಸರಳತೆ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ಒಂದು ಶಾಲೆಯಲ್ಲಿ ವಚನ ಶ್ರಾವಣವೆಂದರೆ, ಅದು ಸಂಸ್ಕೃತಿಯ ಹಬ್ಬ. ಮಕ್ಕಳು ವಚನಗಳನ್ನು ಕಲಿತು ಹಾಡುತ್ತಾರೆ, ಓದಿ ವ್ಯಾಖ್ಯಾನ ಮಾಡುತ್ತಾರೆ, ವೇಷಭೂಷಣ ಧರಿಸಿ ನಲಿಯುತ್ತಾರೆ ಎಂದು ಹರ್ಷಿಸಿದರು.
ಮೋಳಿಗೆ ಮಾರಯ್ಯ, ಮಡಿವಾಳ ಮಾಚಿದೇವ, ಆಯ್ದಕ್ಕಿ ಲಕ್ಕಮ್ಮ, ಮಹಾದೇವಿಯಕ್ಕ, ಸತ್ಯಕ್ಕ ಮೊದಲಾದ ವಚನಕಾರರ ವೇಷ ಧರಿಸಿದ ಎಸ್.ಎಸ್. ಪಬ್ಲಿಕ್ ಶಾಲೆಯ 25ಕ್ಕೂ ಹೆಚ್ಚು ಮಕ್ಕಳು ವಚನಗಳನ್ನು ಹಾಡಿ, ಅರ್ಥ ಹೇಳಿದರು. ವಚನಗಳಿಗೆ ನೃತ್ಯ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ ರಾಜ್ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.