ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 15 ವರ್ಷಗಳ ಬಳಿಕ ಸಿಕ್ಕಿಬಿದ್ದ ಕೈದಿ

Last Updated 20 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಕೈದಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್‌ (45) ಎಂಬಾತನನ್ನು 15 ವರ್ಷಗಳ ಬಳಿಕ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಗಮ್ಮನಪಾಳ್ಯ ಮದೀನಾ ನಗರದ ನಿವಾಸಿ ಸುಹೇಲ್, 2007ರಲ್ಲಿ ಪೆರೋಲ್ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಹೋಗಿದ್ದ. ಅಲ್ಲಿ ಹೆಸರು ಬದಲಿಸಿಕೊಂಡಿದ್ದ. ಸಾಗರ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಆಯುರ್ವೇದಿಕ್ ಔಷಧಗಳ ಮಾರಾಟ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಈತನ ಬಗ್ಗೆ ಇತ್ತೀಚೆಗೆ ಸುಳಿವು ಸಿಕ್ಕಿತ್ತು. ಬೆಳ್ತಂಗಡಿಗೆ ಹೋದ ವಿಶೇಷತಂಡ ಬಂಧಿಸಿ ನಗರಕ್ಕೆ ಕರೆತಂದಿದೆ. ಕೋರ್ಟ್‌ಗೆ ಹಾಜರುಪಡಿಸಿದ್ದು, ಸದ್ಯ ಜೈಲಿನಲ್ಲಿದ್ದಾನೆ’ ಎಂದು ತಿಳಿಸಿದರು.

ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ: ‘ಸುಹೇಲ್, 2000ರಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. 2004ರಲ್ಲಿ ಜೀವಾವಧಿ ಶಿಕ್ಷೆಯೂ ಆಗಿತ್ತು’ ಎಂದು ಪೊಲೀಸರು ಹೇಳಿದರು.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಸುಹೇಲ್, 30 ದಿನಗಳ ಪೆರೋಲ್ ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ನಿಗದಿತ ದಿನದಂದು ಈತ ವಾಪಸು ಜೈಲಿಗೆ ಬಂದಿರಲಿಲ್ಲ. ಈ ಬಗ್ಗೆ 2014ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಅಂದಿನಿಂದ ಹುಡುಕಾಟ ನಡೆದಿತ್ತು’ ಎಂದು ತಿಳಿಸಿದರು.

₹ 1 ಲಕ್ಷ ಬಹುಮಾನ: ‘ಸುಹೇಲ್ ಬಂಧನಕ್ಕೆ ಆರಂಭದಲ್ಲಿ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಆತನ ಸುಳಿವು ಕೊಟ್ಟವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇದರ ನಡುವೆಯೇ ವಿಶೇಷ ತಂಡವೇ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT