ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಪ್ರತಿ ಮತ ನಿರ್ಣಾಯಕ: ರಾಜ್ಯಪಾಲ ಗೆಹಲೋತ್ ಅಭಿಪ್ರಾಯ

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಗೆಹಲೋತ್ ಅಭಿಪ್ರಾಯ
Last Updated 25 ಜನವರಿ 2023, 21:57 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಒಂದು ಮತದಿಂದ ಏನೂ ಆಗದು ಎಂಬ ಉದಾಸೀನ ಮನೋಭಾವ ತೊರೆಯಬೇಕು. ಒಂದು ಮತಕ್ಕೆ ದೇಶದ ಚಿತ್ರಣವನ್ನೇ ಬದಲಿಸುವ ಶಕ್ತಿ ಇರುತ್ತದೆ ಎನ್ನುವ ಸತ್ಯ ಅರಿತು ಮತದಾನದಲ್ಲಿ ಭಾಗವಹಿಸಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಭಾರತ ಚುನಾವಣಾ ಆಯೋಗ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಲವು ಬಾರಿ ಸೋಲು, ಗೆಲುವಿನ ನಿರ್ಧಾರ ಒಂದು ಮತವನ್ನು ಅವಲಂಬಿಸಿರುತ್ತದೆ. ಚುನಾವಣೆ ಅರ್ಥಪೂರ್ಣಗೊಳಿಸಲು ಪ್ರತಿಯೊಂದು ಮತವೂ ನಿರ್ಣಾಯಕವಾಗಿರುತ್ತದೆ. ಎಚ್ಚರಿಕೆಯ ಹಾಗೂ ಜಾಗೃತ ಮತದಾರರು ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮತದಾನ ಹಕ್ಕಲ್ಲ, ಕರ್ತವ್ಯ ಎಂದು ತಿಳಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಸರ್ಕಾರವೂ ಜನರ ಆಶಯ, ಆಶೋತ್ತರಗಳಿಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ನೀಡಲಾಗಿದ್ದರೂ, 18ರಿಂದ 24 ವರ್ಷದ ಒಳಗಿನವರು ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸದೇ ಇರುವುದು ಬೇಸರದ ಸಂಗತಿ. ಚುನಾವಣಾ ಆಯೋಗ ಅರ್ಹ ಮತದಾರರ ಹೆಸರುಗಳು ಬಿಟ್ಟು ಹೋಗದಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ’ ಎಂದರು.

‘ಸ್ವತಂತ್ರ, ನ್ಯಾಯೋಚಿತ ಹಾಗೂ ಬಲಿಷ್ಠ ಚುನಾವಣಾ ಆಯೋಗವನ್ನು ಜ.25, 1950ರಂದು ಸ್ಥಾಪಿಸಲಾಯಿತು. ಭಾರತದ ಸಂವಿಧಾನ ಮತದಾರರಿಗೆ ಮಹತ್ತರವಾದ ಜವಾಬ್ದಾರಿ ನೀಡಿದೆ. ಅದಕ್ಕಾಗಿ ಭಾರತೀಯರು ಸಂವಿಧಾನ ರಚನಾಕಾರರಿಗೆ ಕೃತಜ್ಞತೆ ಸಲ್ಲಿಸಬೇಕು’ ಎಂದು ಹೇಳಿದರು.

ಚುನಾವಣೆ ನಿರ್ವಹಣೆ, ಸುಗಮ ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರಿಗೆ ಅರಿವು ಮೂಡಿಸುವ ವಿಷಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT