ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಒ.ಸಿ ದಂಧೆ: ಬೆಸ್ಕಾಂ ಅಧಿಕಾರಿಗಳು ಶಾಮೀಲು ಶಂಕೆ

ಬಿಬಿಎಂಪಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿದ ನಗರಾಭಿವೃದ್ಧಿ ಇಲಾಖೆ
Last Updated 25 ಜುಲೈ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡಗಳ ಮಾಲೀಕರಿಗೆ ನಕಲಿ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ವಿತರಿಸುವ ದಂಧೆ ವ್ಯಾಪಕವಾಗಿ ಹರಡಿಕೊಂಡಿರುವುದುನಗರಾಭಿವೃದ್ಧಿ ಇಲಾಖೆ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.

‘ಬಿಬಿಎಂಪಿ ವಿತರಿಸುವ ಮಾದರಿಯಲ್ಲೇ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದ್ದು, ಈ ಅಕ್ರಮದಲ್ಲಿಬೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ನಗರಾಭಿವೃದ್ಧಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಇಲಾಖೆ ಕ್ಲೀನ್ ಚಿಟ್ ನೀಡಿದೆ.

‘ಮಹದೇವಪುರ ವಲಯದ ಬೆಳ್ಳಂದೂರಿನಲ್ಲಿ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್‌, ಹರಳೂರಿನ ಎಚ್.ಆರ್. ಮೋಹನ್‌ಕುಮಾರ್, ಕಸವನಹಳ್ಳಿಯಲ್ಲಿ ರಾಜಶೇಖರರೆಡ್ಡಿ, ಭೂಪಾಲರೆಡ್ಡಿ ಎಂಬವರು ಕಟ್ಟಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಬೆಸ್ಕಾಂಗೆ ಸಲ್ಲಿಕೆಯಾಗಿರುವ ಸ್ವಾಧೀನಾನುಭ‌ವ ಪ್ರಮಾಣಪತ್ರಗಳು ನಕಲಿ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಕಟ್ಟಡ ಮಾಲೀಕರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಿ ತನಿಖೆಯನ್ನು ಚುರುಕುಗೊಳಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಬಹುದು’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಸಲ್ಲಿಸಲಾಗಿದೆ.

ಪ್ರಕರಣದಹಿನ್ನೆಲೆ: ಕೆಎಂಸಿ ಕಾಯ್ದೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡ ನಿರ್ಮಾಣಕ್ಕೂ ಮೊದಲು ಮಾಲೀಕರು ನೀಲನಕ್ಷೆ ಸಿದ್ಧಪಡಿಸಿ ಬಿಬಿಎಂಪಿಯಿಂದ ಅನುಮೋದನೆ ಪಡೆಯಬೇಕು. ಕಟ್ಟಡ ನಿರ್ಮಾಣವಾದ ನಂತರ ಅದಕ್ಕೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ಪಡೆಯುವುದೂ ಕಡ್ಡಾಯ. ಈ ಪತ್ರ ನೀಡುವ ಮುನ್ನ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು.

ಆದರೆ,ಬಿಬಿಎಂಪಿ ಮಂಜೂರು ಮಾಡಿದ ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದವರು, ಆ ತಪ್ಪನ್ನು ಮರೆಮಾಚಲು ನಕಲಿ ಪ್ರಮಾಣಪತ್ರದ ಮೊರೆ ಹೋಗುತ್ತಾರೆ.

ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್‌, ಎಚ್.ಆರ್. ಮೋಹನ್‌ಕುಮಾರ್, ರಾಜಶೇಖರರೆಡ್ಡಿ, ಭೂಪಾಲರೆಡ್ಡಿ ಎಂಬವರು ಕಟ್ಟಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂಗೆ ಸಲ್ಲಿಕೆಯಾಗಿರುವ ಪ್ರಮಾಣಪತ್ರಗಳನ್ನು ಭ್ರಷ್ಟಾಚಾರ ನಿರ್ಮೂಲನ ಮತ್ತು ಭೂ ರಕ್ಷಣಾ ಸಮಿತಿ ಅಧ್ಯಕ್ಷ ಆರ್. ರಮೇಶ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದರು.

ಆದರೆ, ಈ ಪ್ರಮಾಣಪತ್ರಗಳನ್ನು ವಿತರಿಸಿಲ್ಲ ಎಂದು ಬಿಬಿಎಂಪಿ ಹಿಂಬರಹ ನೀಡಿತ್ತು. ಈ ಎರಡೂ ದಾಖಲೆಗಳೊಂದಿಗೆ ರಮೇಶ್ ಅವರು ಟಿ.ಎಂ. ವಿಜಯಭಾಸ್ಕರ್ ಅವರಿಗೆ ದೂರು ನೀಡಿದ್ದರು.

‘ಬಿಬಿಎಂಪಿ ನೀಡುವ ಮಾದರಿಯಲ್ಲೇ ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ವಿತರಿಸುವ ದಂಧೆ ನಡೆಯುತ್ತಿದೆ. ಇದಕ್ಕಾಗಿ ಏಜೆಂಟರೂ ಇದ್ದಾರೆ. ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಪ್ರತಿ ಪ್ರಮಾಣಪತ್ರಕ್ಕೆ ₹2 ಲಕ್ಷದಿಂದ ₹3 ಲಕ್ಷ ಪಡೆಯಲಾಗುತ್ತಿದೆ’ ಎಂದು ರಮೇಶ್ ದೂರಿದ್ದರು.

ಈ ದೂರನ್ನು ಆಧರಿಸಿ ಸೂಕ್ತ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಗೆ ಮುಖ್ಯ ಕಾರ್ಯದರ್ಶಿ ಸೂಚಿಸಿ‌ದ್ದರು.

‘ಪ್ರಮಾಣ ಪತ್ರಗಳು ನಕಲಿಯಾಗಿದ್ದರೂ ಅವುಗಳನ್ನು ಬಿಬಿಎಂಪಿ ತಯಾರಿಸಿರುವುದಕ್ಕೆ ಪುರಾವೆಗಳಿಲ್ಲ. ಅಕ್ರಮದಲ್ಲಿ ಪಾಲಿಕೆ ಅಧಿಕಾರಿಗಳು ಭಾಗಿಯಾಗಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಪ‍್ರಮಾಣ ಪತ್ರಗಳನ್ನು ಆಧರಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮುನ್ನ ಅವುಗಳ ಸಿಂಧುತ್ವ ಪರೀಕ್ಷೆಗಾಗಿ ಬಿಬಿಎಂಪಿಗೆ ಕಳುಹಿಸುತ್ತಿಲ್ಲ. ಈ ಮಾಹಿತಿ ಬೆಸ್ಕಾಂ ಅಧಿಕಾರಿಗಳು ಅಥವಾ ನೌಕರರ ಮೂಲಗಳಿಂದಲೇ ಕಟ್ಟಡಗಳ ಮಾಲೀಕರಿಗೆ ದೊರೆತಿರಬಹುದು. ವ್ಯಾಪಕ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಬೆಸ್ಕಾಂ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯೂ ಇದೆ.ಈ ಬಗ್ಗೆ ಬೆಸ್ಕಾಂ ಆಂತರಿಕ ತನಿಖೆ ನಡೆಸುವುದು ಸೂಕ್ತ’ ಎಂದು ತಿಳಿಸಲಾಗಿದೆ.

ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುವದಂಧೆ ಬಗ್ಗೆ ಏಪ್ರಿಲ್ 27ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

**

ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದರೆ ಇನ್ನಷ್ಟು ಸತ್ಯ ಹೊರಗೆ ಬರಲಿದೆ
- ಆರ್. ರಮೇಶ್, ದೂರುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT