ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಗನ ಹೆಸರಿನಲ್ಲಿ ನಕಲಿ ಸಂಸ್ಥೆ: ಬಿಬಿಎಂಪಿ ಆರೋಗ್ಯಾಧಿಕಾರಿ ವಿರುದ್ಧ ಆರೋಪ ಪಟ್ಟಿ

Published : 14 ಫೆಬ್ರುವರಿ 2024, 23:30 IST
Last Updated : 14 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ತನ್ನ ಮಗನ ಹೆಸರಿನಲ್ಲಿ ನಕಲಿ ಸಂಸ್ಥೆ ಸೃಷ್ಟಿಸಿ ನಿಯಮಬಾಹಿರವಾಗಿ ಟೆಂಡರ್‌ ಗುತ್ತಿಗೆ ನೀಡಿರುವ ಆರೋಗ್ಯಾಧಿಕಾರಿ ಡಾ. ಸವಿತಾ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಆಡಳಿತದ ಉಪ ಆಯುಕ್ತರು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಶಿಫಾರಸು ಮಾಡಿದ್ದಾರೆ.

ಡಾ. ಸವಿತಾ ಅವರ ಕರ್ತವ್ಯಲೋಪಕ್ಕೆ ಸಂಬಂಧಿಸಿದ ನಿರ್ದಿಷ್ಟ ಆರೋಪ ಪಟ್ಟಿ ಮತ್ತು ಆರೋಪದ ವಿಷಯವನ್ನು ಸಮರ್ಥಿಸುವ ದಾಖಲೆಗಳು ಹಾಗೂ ಸಾಕ್ಷಿಗಳ ಅನುಬಂಧಗಳನ್ನು ಉಪ ಆಯುಕ್ತರು ಪತ್ರದೊಂದಿಗೆ ಲಗತ್ತಿಸಿದ್ದಾರೆ. ಡಾ.ಸವಿತಾ ಅವರು ಗ್ರೂಪ್‌–ಎ ವೃಂದದ ಅಧಿಕಾರಿಯಾಗಿರುವುದರಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಪ್ರಕಾರ, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಯಾಗಿರುವ ಡಾ. ಸವಿತಾ ಅವರು 2020ರ ನ.26ರಿಂದ 2021 ಮೇ 10ರವರೆಗೆ ಬೊಮ್ಮನಹಳ್ಳಿ ವಲಯ ಆರೋಗ್ಯಾಧಿಕಾರಿಯಾಗಿದ್ದ ಸಮಯದಲ್ಲಿ ತಮ್ಮ ಮಗ ಸಿ. ಸಿದ್ದರಾಜು ಚಿರಾಗ್‌ ಒಡೆತನದ ಎ.ವಿ.ಎಸ್‌. ಎಂಟರ್‌ಪ್ರೈಸಸ್‌ ಎಂಬ ನಕಲಿ ಸಂಸ್ಥೆಗೆ ಕಾನೂನುಬಾಹಿರವಾಗಿ ಕಾರ್ಯಾದೇಶ ನೀಡಿದ್ದಾರೆ. 

ಈ ಕಾರ್ಯಾದೇಶದ ಕಡತಗಳಲ್ಲಿ ಹಲವು ನ್ಯೂನತೆಗಳಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಮುಖ್ಯ ಆರೋಗ್ಯಾಧಿಕಾರಿ 2023ರ ಜ.31ರಂದು ಸವಿತಾ ಅವರಿಗೆ ನೋಟಿಸ್‌ ನೀಡಿದ್ದರು. ಆ.19ರಂದು ಮುಖ್ಯ ಆಯುಕ್ತರ ಆಡಳಿತ ಶಾಖೆಯಿಂದಲೂ ಸಮಜಾಯಿಷಿ ನೀಡಲು ಅವರಿಗೆ ಸೂಚಿಸಲಾಗಿತ್ತು. ಆದರೆ, ಸಮಜಾಯಿಷಿ ನೀಡದೆ ನಿಯಮಾವಳಿಗಳನ್ನು ಉಲ್ಲಂಘಿಸಿ, ಗಂಭೀರ ಕರ್ತವ್ಯಲೋಪ ಎಸಗಿದ್ದು, ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.

‘ಔಷಧ ಸಿಂಪಡಣೆ ಕಾರ್ಯಕ್ಕೆ ಕಾರ್ಮಿಕರು, ಆಟೊ, ಚಾಲಕರು ಮತ್ತು ಇಂಧನ ಒದಗಿಸುವ ಗುತ್ತಿಗೆ, ಸೊಳ್ಳೆ ನಿಯಂತ್ರಣಕ್ಕೆ ಗ್ಯಾಂಗ್‌ಮ್ಯಾನ್‌ಗಳನ್ನು ಒದಗಿಸುವ ಗುತ್ತಿಗೆ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ವೈದ್ಯರನ್ನು ಒದಗಿಸುವ ಗುತ್ತಿಗೆಯನ್ನು ಆರೋಗ್ಯಾಧಿಕಾರಿಯಾಗಿ ಅವರ ಮಗ ಸಿದ್ದರಾಜು ಚಿರಾಗ್‌ ಅವರ ಸಂಸ್ಥೆಗೆ ಕಾನೂನುಬಾಹಿರವಾಗಿ ಡಾ. ಸವಿತಾ ನೀಡಿದ್ದಾರೆ. ಇದು ಗಂಭೀರ ಕರ್ತವ್ಯಲೋಪ. ಈ ಎಲ್ಲ ಕಾರ್ಯಾದೇಶಗಳನ್ನು ತಾಂತ್ರಿಕ ಜಾಗೃತ ಕೋಶ (ಟಿವಿಸಿಸಿ) ಪರಿಶೀಲಿಸಿದ್ದು, ನ್ಯೂನತೆಗಳು ಕಂಡು ಬಂದಿದೆ. ಬಿಲ್‌ ಸಲ್ಲಿಸಿರುವ ಕಡತದಲ್ಲಿ ‘ತೃಪ್ತಿಕರ ನಿರ್ವಹಣೆ ಮಾಡಿರುವ’ ಬಗ್ಗೆ ಅಧಿಕಾರಿಗಳು ದೃಢೀಕರಣ ಮಾಡಿಲ್ಲ. ಗುತ್ತಿಗೆದಾರರಿಂದ ಇನ್‌ವಾಯ್ಸ್‌ ಸಲ್ಲಿಕೆಯಾಗದಿದ್ದರೂ ಹಣ ಪಾವತಿಮಾಡಲಾಗಿದೆ’ ಎಂದು ಟಿವಿಸಿಸಿ ಮುಖ್ಯ ಎಂಜಿನಿಯರ್‌ ವರದಿ ನೀಡಿದ್ದಾರೆ.

ಡಾ. ಸವಿತಾ ಅವರ ಕರ್ತವ್ಯ ಲೋಪ ಹಾಗೂ ಅಕ್ರಮಕ್ಕೆ ಹಿಂದಿನ ಹೆಚ್ಚುವರಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್‌, ಟಿವಿಸಿಸಿ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌, ಅಧೀಕ್ಷಕ ಎಂಜಿನಿಯರ್‌ ಸ್ವಯಂಪ್ರಭ, ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಬೊಮ್ಮನಹಳ್ಳಿ ಆರೋಗ್ಯ ವೈದ್ಯಾಧಿಕಾರಿ ನಾಗೇಂದ್ರಕುಮಾರ್‌, ಬೊಮ್ಮನಹಳ್ಳಿ ಜಂಟಿ ಆಯುಕ್ತರು ಸಾಕ್ಷಿಗಳಾಗಿದ್ದಾರೆ ಎಂದು ಉಪ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT