ಬುಧವಾರ, ಅಕ್ಟೋಬರ್ 20, 2021
24 °C
ಬಿಎಂಟಿಸಿ ನೌಕರನ ಸಾವಿನಿಂದ ನೊಂದಿದ್ದ ಕುಟುಂಬ

ಮಗನಿಗೆ ನೇಣು ಹಾಕಿಸಿ, ಮಗಳ ಕೊಂದು ತಾಯಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆತ್ಮಹತ್ಯೆಗೆ ಪ್ರಚೋದಿಸಿ ಮಗನಿಗೆ ನೇಣು ಹಾಕಿಸಿ, ಮಗಳನ್ನು ಕೊಂದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಬೆಂಗಳೂರು ಉತ್ತರ ತಾಲ್ಲೂಕಿನ ಪ್ರಕೃತಿ ಬಡಾವಣೆಯ ವಸಂತಾ (36), ಅವರ ಮಗ ಯಶವಂತ (15) ಹಾಗೂ ಮಗಳು ನಿಶ್ಚಿತಾ (7) ಮೃತರು. ಮರಣೋತ್ತರ ಪರೀಕ್ಷೆ ನಡೆಸಿ ಮೂವರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮಗನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಮಗಳನ್ನು ಕೊಂದ ಆರೋಪದಡಿ ವಸಂತಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.

ಬಿಎಂಟಿಸಿ ನೌಕರನ ಕುಟುಂಬ: ‘ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪ್ರಸನ್ನಕುಮಾರ್, ನಗರದ ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಕೆಲ ವರ್ಷಗಳ ಹಿಂದೆ ವಸಂತಾ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಬಾಡಿಗೆ ಮನೆಯಲ್ಲಿದ್ದ ದಂಪತಿ, ಸ್ವಂತ ಮನೆ ಖರೀದಿಸಲು ಮುಂದಾಗಿದ್ದರು. ₹ 20 ಲಕ್ಷ ಸಾಲ ಮಾಡಿ ಪ್ರಕೃತಿ ಬಡಾವಣೆಯಲ್ಲಿ ಮನೆ ಖರೀದಿಸಿದ್ದರು. ಅಲ್ಲಿಯೇ ಮಕ್ಕಳ ಜೊತೆ ದಂಪತಿ ವಾಸವಿದ್ದರು.’

‘ಕೊರೊನಾ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದ ಪ್ರಸನ್ನ ಕುಮಾರ್, ಚಿಕಿತ್ಸೆಗೆ ಸ್ಪಂದಿಸದೇ 2020ರ ಆಗಸ್ಟ್ 7ರಂದು ತೀರಿಕೊಂಡಿದ್ದರು. ಅವರ ಸಾವಿನಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ವಸಂತಾ ಸಹ ಮಾನಸಿಕವಾಗಿ ನೊಂದಿದ್ದರು. ಮನೆ ಖರೀದಿಗೆ ಮಾಡಿದ್ದ ಸಾಲ ತೀರಿಸಲು ಅವರಿಗೆ ಆಗಿರಲಿಲ್ಲ. ಹೀಗಾಗಿ, ಸಾಲಗಾರರ ಕಾಟವೂ ಹೆಚ್ಚಾಗಿತ್ತು’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

‘ಮನೆ ಮಾರಲು ತೀರ್ಮಾನಿಸಿದ್ದ ವಸಂತಾ, ಸಹೋದರ ಹಾಗೂ ಇತರರ ಮೂಲಕ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದರು. ಆದರೆ, ಮನೆ ಮಾರಾಟ ಆಗಿರಲಿಲ್ಲ. ಇದು ವಸಂತಾ ಅವರನ್ನು ಮತ್ತಷ್ಟು ಚಿಂತೆಗೆ ದೂಡಿತ್ತು. ನೊಂದ ವಸಂತಾ, ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರೇ ಅವರನ್ನು ಕಾಪಾಡಿ ಬುದ್ದಿವಾದ ಹೇಳಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ಅಧಿಕಾರಿ ಹೇಳಿದರು.

ಮನೆ ಕೊಠಡಿಯಲ್ಲಿ ಆತ್ಮಹತ್ಯೆ: ‘ಮನೆಯ ಕೊಠಡಿಯೊಂದರಲ್ಲಿ ಮಗನಿಗೆ ನೇಣು ಹಾಕಿಸಿದ್ದ ವಸಂತಾ, ನಂತರ ಮಗಳನ್ನು ಕೊಂದು ಆಕೆಯ ಜೊತೆಯಲ್ಲೇ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದೂ ಅಧಿಕಾರಿ ತಿಳಿಸಿದರು.

‘ಮನೆ ಮಾರಾಟ ಬಗ್ಗೆ ಮಾತನಾಡಲು ವಸಂತಾ ಅವರಿಗೆ ಸಹೋದರ ಕರೆ ಮಾಡಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಗಾಬರಿಗೊಂಡ ಸಹೋದರ, ರಾತ್ರಿ ಮನೆ ಬಳಿ ಬಂದು ನೋಡಿದಾಗಲೇ ವಿಷಯ ಗೊತ್ತಾಯಿತು’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

’ಮನೆ ಮಾರಿ ಸಾಲ ತೀರಿಸಿ’

‘ವಸಂತಾ ಅವರು ಬರೆದಿದ್ದಾರೆ ಎನ್ನಲಾದ ಮರಣ ಪತ್ರ ಮನೆಯಲ್ಲಿ ಸಿಕ್ಕಿದೆ. ‘ಈ ಸಾವಿಗೆ ನಾವೇ ಕಾರಣ. ನನ್ನ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನವರು ಅಂತ ಯಾರೂ ಇಲ್ಲ. ಈ ಮನೆ ಮಾರಾಟ ಮಾಡಿ, ಸಾಲ ತೀರಿಸಿ’ ಎಂಬುದಾಗಿ ಪತ್ರದಲ್ಲಿ ಬರೆಯಲಾಗಿದೆ. ಅದನ್ನು ಸುಪರ್ದಿಗೆ ಪಡೆದು ಪರಿಶೀಲನೆ ನಡೆಸುತ್ತಿದ್ದೇವೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘₹ 30 ಲಕ್ಷ ಪರಿಹಾರಕ್ಕೆ ಕಾಯುತ್ತಿದ್ದ ಕುಟುಂಬ’

’ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರನ್ನು ಕೊರೊನಾ ಯೋಧರೆಂದು ಸರ್ಕಾರ ಘೋಷಿಸಿತ್ತು. ಅವರು ಕೋವಿಡ್‌ನಿಂದ ಮೃತಪಟ್ಟರೆ ಅವಲಂಬಿತರಿಗೆ ₹ 30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ, ಪ್ರಸನ್ನಕುಮಾರ್ ಅವರಿಗೆ ಯಾವುದೇ ಪರಿಹಾರ ನೀಡಿರಲಿಲ್ಲ’ ಎಂದು ಸಂಬಂಧಿಕರೊಬ್ಬರು ಹೇಳಿದರು.

‘ಪರಿಹಾರಕ್ಕಾಗಿ ಪತಿ ವಸಂತಾ, ಹಲವು ಬಾರಿ ಬಿಎಂಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ನಾನಾ ಕಾರಣ ನೀಡಿದ್ದ ಅಧಿಕಾರಿಗಳು, ಪರಿಹಾರ ನೀಡಲು ಮಂಜೂರು ಮಾಡಿಸಲು ಪ್ರಯತ್ನಿಸಿರಲಿಲ್ಲ. ‘ಪರಿಹಾರ ಬಂದರೆ ಸಾಲ ತೀರಿಸಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬಹುದು’ ಎಂದು ತಿಳಿದಿದ್ದ ವಸಂತಾ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನೊಂದಿದ್ದರು’ ಎಂಬುದಾಗಿಯೂ ಸಂಬಂಧಿಕರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು, ‘ಕೋವಿಡ್‌ನಿಂದ ಮೃತಪಟ್ಟಿರುವ ನಾಲ್ವರು ನೌಕರರ ಅವಲಂಬಿತರಿಗೆ ಈಗಾಗಲೇ ತಲಾ ₹30 ಲಕ್ಷ ಪರಿಹಾರ ಕೊಡಿಸಲಾಗಿದೆ. ಪ್ರಸನ್ನಕುಮಾರ್ ಪ್ರಕರಣದಲ್ಲಿ ಪರಿಹಾರ ಮಂಜೂರು ಆಗಿಲ್ಲವೇಕೆ? ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು