ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ದಾಖಲೆಗಳು ಸಿಗದೆ ರೈತರಿಗೆ ತೊಂದರೆ

ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸದೆ ವಜಾ ಆಗುತ್ತಿರುವ ಅರ್ಜಿಗಳು
Last Updated 28 ಅಕ್ಟೋಬರ್ 2022, 21:16 IST
ಅಕ್ಷರ ಗಾತ್ರ

ಯಲಹಂಕ: ತಾಲ್ಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ (ದಾಖಲೆಗಳ ಕೊಠಡಿ) ಹಳೆಯ ಮೂಲದಾಖಲೆಗಳು ನಿಗದಿತ ಸಮಯಕ್ಕೆ ದೊರೆಯುತ್ತಿಲ್ಲ. ಹೀಗಾಗಿ ರೈತರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಯಲಹಂಕ ತಾಲ್ಲೂಕಿನ ಜಾಲಾ, ಹೆಸರಘಟ್ಟ ಹಾಗೂ ಯಲಹಂಕ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳ ಜನರು, ತಮ್ಮ ಜಮೀನುಗಳಿಗೆ ಸಂಬಂಧಪಟ್ಟಂತೆ ಕೈಬರಹದ ಹಳೆಯ ಪಹಣಿ, ಮ್ಯುಟೇಶನ್, ಸಾಗುವಳಿ ಚೀಟಿ, ಒಎಂ ಕಾಪಿ, ಎಲ್.ಆರ್.ಎಫ್,
ಐ.ಎಲ್.ಆರ್.ಆರ್ ಮತ್ತಿತರ ಹಳೆಯ ದಾಖಲೆಗಳನ್ನು ಪಡೆಯಲು ಈ ಕಚೇರಿಗೆ ಬರುತ್ತಾರೆ. ಆದರೆ ಹಲವು ದಿನ ಅಲೆದಾಡಿದರೂ ಸಮಯಕ್ಕೆ ಸರಿಯಾಗಿ ದಾಖಲೆಗಳು ಸಿಗುತ್ತಿಲ್ಲ. ಲಂಚ ನೀಡುವ ಬಲಾಢ್ಯರು ಮತ್ತು ಭೂಗಳ್ಳರಿಗೆ ಮಾತ್ರ ದಾಖಲೆಗಳು ಬಹಳ ಬೇಗನೆ ದೊರೆಯುತ್ತವೆ ಎಂಬುದು ಸಾರ್ವಜನಿಕರ ಆರೋಪ.

ಕೆಲವೊಂದು ಭೂ-ವ್ಯಾಜ್ಯಗಳು ಮತ್ತು ವಿವಾದಗಳಿಗೆ ಸಂಬಂಧಪಟ್ಟಂತೆ ಜೆಎಂಎಫ್, ಸಿವಿಲ್, ಹೈಕೋರ್ಟ್‌, ಕೆಎಟಿ, ಭೂ-ನ್ಯಾಯಮಂಡಳಿ, ಡಿಸಿ, ಎಸಿ ಕಚೇರಿಗಳಿಗೆ ನ್ಯಾಯಾಲಯಗಳ ಆದೇಶದಂತೆ ನಿಗದಿತ ಸಮಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ಆದರೆ ದಾಖಲೆಗಳು ಸಿಗದೆ ವಿಳಂಬವಾಗುವುದರಿಂದ ಪ್ರಕರಣವನ್ನು 2-3 ಬಾರಿ ಮಂದೂಡಲಾಗುತ್ತದೆ. ಇದರಿಂದ ರೈತರು ಕಚೇರಿಯಿಂದ ಕಚೇರಿಗೆ ಮತ್ತು ನ್ಯಾಯಾಲಯಗಳಿಗೆ ಸಾಕಷ್ಟು ಬಾರಿ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ದಾಖಲೆಗಳನ್ನು ಹಾಜರುಪಡಿಸದ ಕಾರಣದಿಂದ ಅರ್ಜಿಗಳನ್ನು ವಜಾ ಮಾಡುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಬಾಗಲೂರು ಗ್ರಾಮದ ನಿವಾಸಿ ಬಿ.ಎಚ್. ಸುರೇಶ್ ದೂರಿದರು.

‘ಸಾರ್ವಜನಿಕರಿಗೆ ಮತ್ತು ರೈತರಿಗೆ ದಾಖಲೆಗಳನ್ನು ನೀಡದ ಸಿಬ್ಬಂದಿ, ಕಡತಗಳನ್ನು ಮರೆಮಾಚಿ ಭೂಗಳ್ಳರಿಗೆ ಸಹರಿಸುವುದು ಇಲ್ಲಿ ಮೇಲ್ನೋಟಕ್ಕೆ ಕಾಣುತ್ತಿದೆ. ಕೆಲವು ಅಧಿಕಾರಿಗಳು ಭೂಮಾಫಿಯ ಮತ್ತು ಡೆವಲಪರ್‌ಗಳೊಂದಿಗೆ ಶಾಮೀಲಾಗಿ ಕಡತಗಳನ್ನು ನೀಡುತ್ತಿದ್ದು, ಈ ಬಗ್ಗೆ ತಹಶೀಲ್ದಾರ್ ರವರಿಗೆ ದೂರು ನೀಡಿದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ದೂರಿದ ಅವರು, ‘ಕೆಲವು ಸಿಬ್ಬಂದಿ ಸುಮಾರು 8-10 ವರ್ಷಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲು ಅವರನ್ನು ಬದಲಿಸಿ, ಹೊಸ ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಸಾರ್ವಜನಿಕರು ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿ, ಅಭಿಲೇಖಾಲಯದಲ್ಲಿ ದಾಖಲೆಗಳನ್ನು ಪಡೆಯಲು ನಿತ್ಯ ಸಾಲುಗಟ್ಟಿ ನಿಂತಿರುತ್ತಾರೆ. ಸಂಜೆ 6 ಗಂಟೆವರೆಗೆ ಕಾಯಿಸಿ, ಕೊನೆಗೆ ನಾಳೆ ಬನ್ನಿ ಎಂದು ಸಿಬ್ಬಂದಿ ಉಡಾಫೆ ಉತ್ತರಗಳನ್ನು ನೀಡುತ್ತಾರೆ. ಅರ್ಜಿ ಸಲ್ಲಿಸಿ 30-40 ದಿನಗಳು ಕಳೆದರೂ ದಾಖಲೆಗಳನ್ನು ನೀಡುವುದಿಲ್ಲ. ಪ್ರಶ್ನಿಸಿದರೆ, ಜೆರಾಕ್ಸ್ ಮಷಿನ್ ಕೆಟ್ಟಿದೆ, ಕೇಸ್ ವರ್ಕರ್ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಸಬೂಬು ನೀಡುತ್ತಾರೆ ಎಂದು ಸಂಪಿಗೇಹಳ್ಳಿ ಗ್ರಾಮದ ನಿವಾಸಿ ಜಿ. ಅಜಯಕುಮಾರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT