ಮಂಗಳವಾರ, ಡಿಸೆಂಬರ್ 10, 2019
17 °C

ಉಡುಪುಗಳಿಗೆ ರಂಗು ತಂದ ಬೆಡಗಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅದು ಇಳಿಸಂಜೆ ಕಳೆದು ನಸುಗತ್ತಲು ಮೂಡುವ ಸಮಯ. ಬಣ್ಣದ ದೀಪಗಳಿಂದ ಅಲಂಕೃತಗೊಂಡ ವೇದಿಕೆ ಸಂಗೀತದ ನಾದದೊಂದಿಗೆ ಮಿಳಿತಗೊಂಡಿತ್ತು. ವೇದಿಕೆ ಮುಂದೆ ಕುಳಿತವರ ಕಣ್ಣು ಹಾಗೂ ಕ್ಯಾಮೆರಾಗಳಲ್ಲಿ ಕಾತರವಿತ್ತು. ಆ ಕಣ್ಣುಗಳ ಕಾತರಕ್ಕೆ ಪೂರ್ಣವಿರಾಮ ಹಾಕಿದ ಮಾಡೆಲ್‌ಗಳು ವಿವಿಧ ವಿನ್ಯಾಸದ ಬಟ್ಟೆಗಳನ್ನು ಧರಿಸಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಕಣ್ಮನ ತಣಿಸಿದರು.  

‘1 ಎಂಜಿ–ಲಿಡೊ ಫ್ಯಾಷನೇಬಲ್ ಒನ್’ ಆರನೇ ಆವೃತ್ತಿಯ ಫ್ಯಾಷನ್ ಶೋ ಕಾರ್ಯಕ್ರಮ ನಗರದ 1ಎಂಜಿ ಮಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಸಮಕಾಲೀನ ವಸ್ತ್ರ ವಿನ್ಯಾಸಕ ರಮೇಶ್ ದೆಮ್ಲ ಅವರು ವಿನ್ಯಾಸಗೊಳಿಸಿದ ದೇಶಿ ಹಾಗೂ ಪಾಶ್ಚಾತ್ಯ ಉಡುಪುಗಳು ನೆರೆದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.

ದೇಶಿ ಹಾಗೂ ಪಾಶ್ಚಾತ್ಯ ಶೈಲಿಯ ಪುರುಷ ಹಾಗೂ ಮಹಿಳೆಯರ ಹೊಸ ರೂಪದ ಉಡುಪುಗಳಿಗೆ ಈ ವೇದಿಕೆ ಸಾಕ್ಷಿಯಾಗಿತ್ತು. ಲಲನೆಯರ ದೇಹಕ್ಕೆ ಹೊಂದುವಂತಿದ್ದ ಉಡುಪುಗಳು ಅವರ ಅಂದಕ್ಕೆ ಇನ್ನಷ್ಟು ಮೆರುಗು ನೀಡುವಂತಿತ್ತು. ಕಡುಕಪ್ಪ, ಕೆಂಪು, ಹಳದಿ, ಹಸಿರು, ಹೀಗೆ ಬಣ್ಣಗಳ ವಿವಿಧತೆಯನ್ನು ಬಟ್ಟೆಗಳಲ್ಲಿ ತೋರಲಾಗಿತ್ತು. 

ಸಂಗೀತದ ಅಲೆಗೆ ತಕ್ಕಂತೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಬರುತ್ತಿದ್ದ ಫ್ಯಾಷನ್‌ ಮಾಡೆಲ್‌ಗಳಿಗೆ ಚಪ್ಪಾಳೆ, ಸಿಳ್ಳೆಯ ಮೂಲಕ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದರು. ಒಟ್ಟಾರೆ ಪಾಶ್ಚಾತ್ಯ ಹಾಗೂ ದೇಶಿ ಬಟ್ಟೆಗಳ ಸಮಾಗಮಕ್ಕೆ ವೇದಿಕೆ ಸಾಕ್ಷಿಯಾಗಿತ್ತು.

ಸೀಸನ್‌ಗಳಿಗೆ ತಕ್ಕುದಾದ ಬಟ್ಟೆಗಳನ್ನು ವಿನ್ಯಾಸಗೊಳಿಸಿ ಈ ಫ್ಯಾಷನ್ ಶೋನಲ್ಲಿ ಪ್ರದರ್ಶಿಸಲಾಯಿತು. ಮಾರ್ಕ್ಸ್‌ ಅಂಡ್ ಸ್ಪೆನರ್ಸ್‌, ಫ್ಯಾಬ್ ಇಂಡಿಯಾ, ಅಂಡ್, ಗ್ಲೋಬಲ್ ದೇಸಿ, ಹೈಡ್‌ಸೈನ್, ಅಡ್ಲೋ, ದ ಮಿಲಾನೋ, ಬೀಯಿಂಗ್ ಹ್ಯೂಮನ್‌, ಕಿಂಗ್‌ಫಿಶರ್, ಸ್ಮೂರ್, ಎಫ್‌ಬಿಬಿ, ಆಯೇಷಾ ಈ ಬ್ರಾಂಡ್‌ಗಳ ಹೊಸ ವಿನ್ಯಾಸದ ಬಟ್ಟೆ, ಬ್ಯಾಗ್‌ ಹಾಗೂ ಆಭರಣಗಳನ್ನು ತೊಟ್ಟ ರೂಪದರ್ಶಿಗಳು ವೇದಿಕೆಯ ಮೇಲೆ ಅವುಗಳನ್ನು ಪ್ರದರ್ಶಿಸುವ ಮೂಲಕ ಅಂದವನ್ನು ಹೆಚ್ಚುವಂತೆ ಮಾಡಿದರು.

ಕಿಸ್‌, ಭರಾಟೆ ಖ್ಯಾತಿಯ ನಟಿ ಶ್ರೀ ಲೀಲಾ ಕಪ್ಪುಬಣ್ಣದ ಗೌನ್ ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. 

ಪ್ರತಿಕ್ರಿಯಿಸಿ (+)