ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿನಲ್ಲಿ ನಡೆದ ಬೆಂಕಿ ಅವಘಡ: ಮಾಲೀಕ ಸೇರಿ ಮೂವರ ಬಂಧನ

₹45 ಲಕ್ಷ ಬೆಲೆಬಾಳುವ ಪ್ಲಾಸ್ಟಿಕ್ ವಸ್ತುಗಳು ಭಸ್ಮ
Last Updated 11 ನವೆಂಬರ್ 2020, 20:21 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆ ಬಳಿಯ ಬಾಪೂಜಿನಗರದ ರಾಸಾಯನಿಕ ಕಾರ್ಖಾನೆಯ ಗೋದಾಮಿನಲ್ಲಿ ಮಂಗಳ
ವಾರ ಸಂಭವಿಸಿದ ಬೆಂಕಿ ಅವಘಡ ಪ್ರಕರಣ ಸಂಬಂಧ ಗೋದಾಮಿನ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಗೋದಾಮಿನ ಮಾಲೀಕ ಸಜ್ಜನ್ ರಾವ್ (66), ಪತ್ನಿ ಕಮಲಾ (60) ಹಾಗೂ ಪುತ್ರ ಅನಿಲ್ ಕುಮಾರ್ (30) ಬಂಧಿತರು.

'ಸ್ಫೋಟಕ ವಸ್ತುಗಳ ಕಾಯ್ದೆ'ಯಡಿ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರನ್ವಯ ಮೂವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

ಬೆಂಕಿ ಸಂಭವಿಸಿದ್ದು ಹೇಗೆ?: ಗೋದಾಮಿನಿಂದ ಲಿಂಗರಾಜಪುರದ ಕಾರ್ಖಾನೆಯೊಂದಕ್ಕೆ ಎಂಟು ಬ್ಯಾರಲ್ ಐಸೊಪ್ರೊಪೈಲ್‌ ಆಲ್ಕೊಹಾಲ್ ರಾಸಾಯನಿಕ ಕಳುಹಿಸಬೇಕಿತ್ತು. ರಾಸಾಯನಿಕ ದ್ರಾವಣಗಳ ಸಾಂದ್ರತೆಯನ್ನು ತೆಳುಗೊಳಿಸಲು ಥಿನ್ನರ್ ಆಗಿ ಬಳಸುವ ಈ ರಾಸಾಯನಿಕವನ್ನು ವಾಹನಕ್ಕೆ ಲೋಡ್ ಮಾಡಲಾಗುತ್ತಿತ್ತು. ಬಿಜು ರಾವ್‍ಗೆ (ಗಾಯಾಳು) ಮಾಲೀಕ ಸಜ್ಜನ್ ರಾವ್ ಫೋನ್ ಮೂಲಕ ಈ ಬಗ್ಗೆ ಸೂಚನೆ ನೀಡಿದ್ದರು. ಬ್ಯಾರಲ್ ಬಿಸಿಲಿಗೆ ಕಾದಿದ್ದರಿಂದ ಹಾಗೂ ಒಂದಕ್ಕೊಂದು ಘರ್ಷಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕಮಲಾ ಮಾಲೀಕತ್ವದ ರೇಖಾ ಕೆಮಿಕಲ್ಸ್ ಕಾರ್ಪೊರೇಷನ್ ಹಾಗೂ ಸಜ್ಜನ್ ಮಾಲೀಕತ್ವದ ರೇಖಾ ಕೆಮಿಕಲ್ ಇಂಡಸ್ಟ್ರೀಸ್ ಕಂಪ
ನಿಗಳು ಬೊಮ್ಮಸಂದ್ರದಲ್ಲಿ ಸಂಸ್ಥೆ ನಡೆಸಲು ಅನುಮತಿ ಪಡೆದಿವೆ. ಅಲ್ಲಿ ಸ್ಥಳದ ಅಭಾವ ಇದ್ದುದರಿಂದ ಬಾಪೂಜಿನಗರ ದಲ್ಲಿ ಯಾವುದೇ ಅನುಮತಿ ಪಡೆಯದೇ ಗೋದಾಮು ಹೊಂದಿದ್ದರು ಎಂದು ಗೊತ್ತಾಗಿದೆ.

ಅವಘಡದಲ್ಲಿ ಐದು ಕಟ್ಟಡಗಳು, ಐದು ಕಾರುಗಳು, ಒಂದು ಟೆಂಪೊ ಹಾಗೂ ಎರಡು ಬೈಕ್ ಹಾನಿಗೊಳಗಾಗಿವೆ. ಇದರ ಪಕ್ಕದ ಗೋದಾಮಿನಲ್ಲಿದ್ದ ₹45 ಲಕ್ಷ ಬೆಲೆಬಾಳುವ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂಬಂಧ ನಷ್ಟ ಅನುಭವಿಸಿರುವ ಆಯಾಜ್ ಹಾಗೂ ಶಂಭುಲಿಂಗ ಎಂಬುವರು ದೂರು ನೀಡಿದ್ದು, ಎರಡು ಎಫ್‍ಐಆರ್ ದಾಖಲಾಗಿದೆ.

ಬೆಂಕಿ ಅವಘಡದ ತನಿಖೆಗೆ ಆದೇಶ: ಬೊಮ್ಮಾಯಿ

ಬೆಂಗಳೂರು: ‘ಬಾಪೂಜಿನಗರದ ಗೋದಾಮಿನಲ್ಲಿ ಉಂಟಾದ ಬೆಂಕಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಅಧಿಕಾರಿಗಳ ಲೋಪವಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಹೊತ್ತಿ ಉರಿದ ರಾಸಾಯನಿಕಗಳ ಗೋದಾಮಿನ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸುಮಾರು 48 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಗೋದಾಮು ನಿರ್ಮಿಸಲು ಬಿಬಿಎಂಪಿಯ ಅಗ್ನಿ ಶಾಮಕ ವಿಭಾಗ ಮತ್ತು ಇತರೆ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದೂ ಬೊಮ್ಮಾಯಿ ವಿವರಿಸಿದರು.

‘ಯಾವುದೇ ಅಧಿಕಾರಿ ಲಾಭ ಮಾಡುವ ಉದ್ದೇಶದಿಂದ ಇಂಥ ಗೋದಾಮಿಗೆ ಅನುಮತಿ ನೀಡಿದ್ದರೆ, ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.

‘₹3.5 ಕೋಟಿ ನಷ್ಟ’

‘ಘಟನೆಯಲ್ಲಿ ಅಗ್ನಿಶಾಮಕ ದಳದ 11 ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿ ಅವಘಡದಿಂದ ಅಂದಾಜು ₹3.5 ಕೋಟಿ ನಷ್ಟ ಆಗಿದೆ. ಇದನ್ನು ಮಾಲೀಕರಿಂದಲೇ ಭರಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಈ ಅವಘಡದಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಎಲ್ಲೆಲ್ಲಿ ಇಂತಹ ಘಟಕಗಳಿವೆ ಎಂದೂ ಪರಿಶೀಲನೆ ನಡೆಸಬೇಕಿದೆ. ಪ್ರತಿಯೊಂದು ಠಾಣೆಯ ವ್ಯಾಪ್ತಿಯಲ್ಲೂ ಇಂತಹ ಸುರಕ್ಷಿತವಲ್ಲದ ಘಟಕಗಳಿದ್ದರೆ ಪತ್ತೆ ಹಚ್ಚಲು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT