ಶನಿವಾರ, ಜನವರಿ 25, 2020
22 °C

ಸಿ.ಎಂ ಸಲಹೆಗಾರರ ಕೊಠಡಿಯಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಲಹೆಗಾರ (ಇ–ಆಡಳಿತ) ಬೇಳೂರು ಸುದರ್ಶನ್ ಅವರ ಕೊಠಡಿಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಯಿತು.

ನಗರದ ಬಹುಮಹಡಿ ಕಟ್ಟಡದಲ್ಲಿರುವ 232ನೇ ಕೊಠಡಿಯಲ್ಲಿ ಸುದರ್ಶನ್ ಅವರ ಆಡಳಿತ ಕಚೇರಿ ಇದೆ. ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ ಸಿಬ್ಬಂದಿ, ವಿದ್ಯುತ್ ಸ್ವಿಚ್ ಆನ್ ಮಾಡಿದ್ದರು. ಅದೇ ಸಂದರ್ಭದಲ್ಲೇ ಟ್ಯೂಬ್‌ಲೈಟ್‌ನಲ್ಲಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ಬೆಂಕಿ ಕೆನ್ನಾಲಗೆ ಕ್ರಮೇಣ ಹೆಚ್ಚಾಗುತ್ತಿತ್ತು. ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು.

‘ಇದೊಂದು ಸಣ್ಣ ಅವಘಡ. ಟ್ಯೂಬ್‌ಲೈಟ್‌ ಹಾಗೂ ವಿದ್ಯುತ್ ತಂತಿಗಳು ಮಾತ್ರ ಸುಟ್ಟಿವೆ. ಉಳಿದಂತೆ ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು. 

ವಿಧಾನಸೌಧ ಠಾಣೆ ಪೊಲೀಸರು, ‘ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ. ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿದೆ’ ಎಂದರು. 

ಪ್ರತಿಕ್ರಿಯಿಸಿ (+)