ಹನಿಟ್ರ್ಯಾಪ್ ಜಾಲ; ಯುವತಿ ಸೇರಿ ಐವರ ಬಂಧನ

ಬೆಂಗಳೂರು: ನಿವೃತ್ತ ಪ್ರಾಂಶುಪಾಲ ಹಾಗೂ ಬ್ಯಾಂಕ್ ಉದ್ಯೋಗಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಹಣ ಸುಲಿಗೆ ಮಾಡಿದ್ದ ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ನಗರದ ಪೊಲೀಸರು, ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ.
‘ಹನಿಟ್ರ್ಯಾಪ್ ಸಂಬಂಧ ನಂದಿನಿ ಲೇಔಟ್ ಹಾಗೂ ಗೋವಿಂದಪುರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಎರಡೂ ಪ್ರಕರಣದಲ್ಲಿ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಂದಿನಿ ಲೇಔಟ್ ನಿವಾಸಿಯಾದ ನಿವೃತ್ತ ಪ್ರಾಂಶುಪಾಲ, ಬಾರ್ ಪರವಾನಗಿ ಪಡೆಯಲು ಪ್ರಯತ್ನಿಸುತ್ತಿದ್ದರು. ಅದನ್ನು ತಿಳಿದುಕೊಂಡಿದ್ದ ಆರೋಪಿ ತ್ರಿಷಾ, ಮೊಬೈಲ್‌ನಲ್ಲಿ ಪ್ರಾಂಶುಪಾಲರನ್ನು ಸಂಪರ್ಕಿಸಿದ್ದಳು. ಪರವಾನಗಿ ಕೊಡಿಸಲು ನೆರವಾಗುವುದಾಗಿ ಹೇಳಿದ್ದ ಆಕೆ, ಸಲುಗೆಯಿಂದ ಮಾತನಾಡಲಾರಂಭಿಸಿದ್ದಳು. ಇಬ್ಬರ ನಡುವೆ ಆತ್ಮಿಯತೆ ಬೆಳೆದಿತ್ತು’ ಎಂದೂ ಹೇಳಿವೆ.
ವರದಿಗಾರರ ಸೋಗಿನಲ್ಲಿ ಕೃತ್ಯ: ‘ಮುತ್ತು, ಪೆದ್ದ ರೆಡ್ಡಿ ಹಾಗೂ ದಾಮೋದರ್ ಎಂಬುವವರ ಜೊತೆ ಸೇರಿ ಸಂಚು ರೂಪಿಸಿದ್ದ ತ್ರಿಷಾ, ನಿವೃತ್ತ ಪ್ರಾಂಶುಪಾಲರಿಗೆ ಕರೆ ಮಾಡಿ ಮನೆಯೊಂದಕ್ಕೆ ಕರೆಸಿಕೊಂಡಿದ್ದಳು. ತ್ರಿಷಾ ಹಾಗೂ ಪ್ರಾಂಶುಪಾಲ ಒಟ್ಟಿಗೆ ಕುಳಿತಿದ್ದ ವೇಳೆಯಲ್ಲೇ ಇತರೆ ಆರೋಪಿಗಳು ಮನೆಗೆ ಬಂದಿದ್ದರು’ ಎಂದೂ ಮೂಲಗಳು ತಿಳಿಸಿವೆ.
‘ತಾವು ಸುದ್ದಿ ವಾಹಿನಿಯೊಂದರ ವರದಿಗಾರರೆಂದು ಹೇಳಿದ್ದ ಆರೋಪಿಗಳು, ನಕಲಿ ಗುರುತಿನ ಚೀಟಿ ತೋರಿಸಿದ್ದರು. ಯುವತಿ ಜೊತೆಗಿನ ವಿಡಿಯೊ ಇದ್ದು, ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು. ₹ 5 ಲಕ್ಷ ಕೊಟ್ಟರೆ ವಿಡಿಯೊ ಪ್ರಸಾರ ಮಾಡುವುದಿಲ್ಲವೆಂದು ಹೇಳಿದ್ದರು. ಹೆದರಿದ್ದ ಪ್ರಾಂಶುಪಾಲ, ₹ 3 ಲಕ್ಷ ಕೊಟ್ಟಿದ್ದರು’ ಎಂದೂ ಮೂಲಗಳು ವಿವರಿಸಿವೆ.
‘ಪುನಃ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನೊಂದ ಪ್ರಾಂಶುಪಾಲ, ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.
ಬ್ಯಾಂಕ್ ಉದ್ಯೋಗಿಗೆ ಬ್ಲ್ಯಾಕ್‌ಮೇಲ್: ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡಿದ್ದ ಆರೋಪಿ ಮೊಹಮ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ದೂರುದಾರ ಉದ್ಯೋಗಿಯ ಮೊಬೈಲ್‌ಗೆ ಯುವತಿಯೊಬ್ಬಳು ಕರೆ ಮಾಡಿದ್ದಳು. ಮಿಸ್ಡ್ ಕಾಲ್ ಎಂಬುದಾಗಿ ಹೇಳಿ ಕರೆ ಕಡಿತಗೊಳಿಸಿದ್ದಳು. ನಂತರ, ‘ಮಿಸ್ಡ್ ಕಾಲ್ ಮಾಡಿದ್ದಕ್ಕೆ ಕ್ಷಮಿಸಿ’ ಎಂದು ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದಳು. ಅದಕ್ಕೆ ಉತ್ತರಿಸಿದ್ದ ಉದ್ಯೋಗಿ, ಮಾತುಕತೆ ಮುಂದುವರಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು’ ಎಂದು ಮೂಲಗಳು ತಿಳಿಸಿವೆ.
‘ಭೇಟಿಯಾಗಬೇಕೆಂದು ಹೇಳಿದ್ದ ಯುವತಿ, ಬ್ಯಾಂಕ್ ಉದ್ಯೋಗಿಯನ್ನು ಅ. 10ರಂದು ವೀರಣ್ಣಪಾಳ್ಯದ ಹೋಟೆಲೊಂದಕ್ಕೆ ಕರೆದಿದ್ದಳು. ದೂರುದಾರ ಹಾಗೂ ಯುವತಿ, ಹೋಟೆಲ್ ಕೊಠಡಿಯಲ್ಲಿ ಕುಳಿತಿದ್ದರು. ಕೊಠಡಿಗೆ ಪ್ರವೇಶಿಸಿದ್ದ ಇತರೆ ಆರೋಪಿಗಳು, ತಾವು ಪೊಲೀಸ್ ಎಂಬುದಾಗಿ ಹೇಳಿಕೊಂಡಿದ್ದರು.’
‘ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದೀಯಾ, ಜೊತೆಗೆ ಡ್ರಗ್ಸ್ ಮಾರಲು ಬಂದಿದ್ದೀಯಾ ಎಂಬುದಾಗಿ ಗದರಿಸಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರ ಮೂರು ಬ್ಯಾಂಕ್ ಖಾತೆಗಳಿಂದ ₹ 5.91 ಲಕ್ಷವನ್ನು ಆರೋಪಿಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಯುವತಿ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಬ್ಯಾಂಕ್ ಉದ್ಯೋಗಿ ಗೋವಿಂದಪುರ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ವಿವರಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.