ಬುಧವಾರ, ಡಿಸೆಂಬರ್ 7, 2022
21 °C

43 ದ್ವಿಚಕ್ರ ವಾಹನ ಸಮೇತ ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಭೇದಿಸಲು ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ವಿದ್ಯಾರಣ್ಯಪುರ ಹಾಗೂ ವರ್ತೂರು ಠಾಣೆ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಶೇಖ್ ನಿಸಾರ್ (20), ಸಾಹಿಲ್ ಪಾಷಾ (27), ಶೇಖ್ ತೌಸೀಫ್ (21), ತಮಿಳುನಾಡಿನ ಬಾಬು (24) ಹಾಗೂ ನಿತಿನ್ (23) ಬಂಧಿತರು. ಇವರಿಂದ ₹ 30 ಲಕ್ಷ ಮೌಲ್ಯದ 43 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ನೋಂದಣಿ ಫಲಕ ಬದಲಿಸಿ ಮಾರಾಟ: ‘ಆರೋಪಿಗಳಾದ ನಿಸಾರ್, ಸಾಹಿಲ್ ಹಾಗೂ ತೌಸೀಫ್ ಮೂವರೂ ಅಪರಾಧ ಹಿನ್ನೆಲೆಯುಳ್ಳವರು. ಇವರಿಂದ ₹ 15 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದರು.

‘ಕಳ್ಳತನ ಹಾಗೂ ಸುಲಿಗೆ ಮಾಡುವುದನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು. ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನಗಳನ್ನು ಗುರುತಿಸಿ ಕದ್ದೊಯ್ಯುತ್ತಿದ್ದರು. ನೋಂದಣಿ ಫಲಕ ಬದಲಾಯಿಸಿ, ಕಡಿಮೆ ಬೆಲೆಗೆ ಮಾರುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು, ಮೋಜು–ಮಸ್ತಿ ಮಾಡುತ್ತಿದ್ದರು’ ಎಂದರು.

‘ವಿಜಯಾ ಬ್ಯಾಂಕ್ ಲೇಔಟ್‌ ನಿವಾಸಿ
ಯೊಬ್ಬರ ಬೈಕ್ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿ
ಬಿದ್ದರು.’ ‘ಯಲಹಂಕ ನ್ಯೂ ಟೌನ್, ಕೊಡಿಗೇಹಳ್ಳಿ, ಯಶವಂತಪುರ, ಜೆ.ಸಿ.ನಗರ, ಹಣ್ಣೂರು, ಬಾಗಲಗುಂಟೆ, ಶೇಷಾದ್ರಿಪುರ, ವಿಜಯನಗರ, ಬನಶಂಕರಿ, ರಾಜಾಜಿನಗರ ಹಾಗೂ ನೆಲಮಂಗಲ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಅಪರಾಧ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ತಮಿಳುನಾಡಿನಿಂದ ಬಂದು ಕಳ್ಳತನ: ‘ಆರೋಪಿಗಳಾದ ಬಾಬು ಹಾಗೂ ನಿತಿನ್, ತಮಿಳುನಾಡಿನಿಂದ ಆಗಾಗ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನ ಕದಿಯುತ್ತಿದ್ದರು. ಅಂಥ ವಾಹನಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು. ಇವರಿಂದ ₹ 15 ಲಕ್ಷ ಮೌಲ್ಯದ 20 ವಾಹನ ಜಪ್ತಿ ಮಾಡಲಾಗಿದೆ’ ಎಂದು ವರ್ತೂರು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು