ಬೆಂಗಳೂರು: ಸುಭದ್ರ ದೇಶ ನಿರ್ಮಾಣಕ್ಕೆ ಶತಮಾನಕ್ಕೆ ಒಮ್ಮೆಯಾದರೂ ಸರ್ ಎಂ. ವಿಶ್ವೇಶ್ವರಯ್ಯ ಅವರಂಥವರು ಜನ್ಮತಾಳಬೇಕು ಎಂದು ಬಿಜೆಪಿ ಮುಖಂಡ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಮತ್ತು ‘ಸರ್ ಎಂ.ವಿ. ಸ್ಮಾರಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಸರ್ ಎಂ.ವಿ. ಅವರು ತಾವು ಬಯಸಿದ್ದನ್ನು ಮಾಡಿ ತೋರಿಸಿದರು’ ಎಂದರು.
ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಂದರ್ಭದಲ್ಲಿ ಕೆಆರ್‌ಎಸ್ ಜಲಾಶಯ, ಕೈಗಾರಿಕೆಗಳ ನಿರ್ಮಾಣ ಸೇರಿದಂತೆ ಅನೇಕ ಮಹಾನ್ ಕಾರ್ಯಗಳನ್ನು ಮಾಡಿ, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಇಂದು ಬೆಂಗಳೂರು ಐ.ಟಿ–ಬಿ.ಟಿ ಕೇಂದ್ರ ಆಗಲು ವಿಶ್ವೇಶ್ವರಯ್ಯ ಅವರೇ ಕಾರಣ ಎಂದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ‘ಆಧುನಿಕ ಭಾರತ ನಿರ್ಮಾಣ ಮತ್ತು ದೇಶದ ಅಭಿವೃದ್ಧಿಗೆ ಸರ್ ಎಂ.ವಿ ಕೊಡುಗೆ ಅಪಾರ. ಅವರಿಂದಲೇ ಸ್ಥಾಪಿತವಾದ ಈ ಸಂಸ್ಥೆ (ಎಫ್‌ಕೆಸಿಸಿಐ) ದೇಶದ ಅರ್ಥ ವ್ಯವಸ್ಥೆಗೆ ಅಪಾರ ಕೊಡುಗೆ ನೀಡುತ್ತಿದೆ’ ಎಂದರು.
ವೋಲ್ವೊ ಸಮೂಹದ ಭಾರತದ ಅಧ್ಯಕ್ಷ ಕಮಲ್ ಬಾಲಿ ಅವರಿಗೆ ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.