ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ’ಕ್ಕೆ ಭಾನುವಾರ 1.25 ಲಕ್ಷ ಮಂದಿ ಭೇಟಿ ನೀಡಿದ್ದು, ₹ 80.5 ಲಕ್ಷ ಸಂಗ್ರಹವಾಗಿದೆ. ಶನಿವಾರಕ್ಕೆ ಹೋಲಿಸಿದರೆ ಉದ್ಯಾನಕ್ಕೆ ಭೇಟಿ ನೀಡಿದವರ ಸಂಖ್ಯೆ ಹೆಚ್ಚಿತ್ತು.
ಶಾಲೆ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಲಾಲ್‌ಬಾಗ್‌ಗೆ ಗುಂಪು–ಗುಂಪಾಗಿ ಆಗಮಿಸಿದರು. ಬಂಡೆ, ಕೆರೆ ಏರಿ, ಬೋನ್ಸಾಯ್, ತರಕಾರಿ ಉದ್ಯಾನ, ಮಾರಾಟ ಮಳಿಗೆಗಳ ಬಳಿ ಕಿಕ್ಕಿರಿದ ಜನಸಂದಣಿ ಇತ್ತು. ಗಾಜಿನ ಮನೆಯಲ್ಲಿ ಜನದಟ್ಟಣೆ ಉಂಟಾಗಿ, ಸಾಲುಗಳನ್ನು ನಿಯಂತ್ರಿಸಲು ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸಪಟ್ಟರು.
ಟಿಕೆಟ್ ಪಡೆಯಲು ಸಹ ಜನತೆ ಸಾಲಿನಲ್ಲಿ ಕೆಲಹೊತ್ತು ನಿಲ್ಲಬೇಕಾಯಿತು. ಇದರಿಂದ ಮಕ್ಕಳು ಹಾಗೂ ವೃದ್ಧರು ಸಮಸ್ಯೆ ಎದುರಿಸಿದರು. ಇದಕ್ಕೂ ಮುನ್ನ ಗುಂಪು–ಗುಂಪಾಗಿ ಬಂದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ರೈಲು ಹತ್ತಿಸಲು ಮೆಟ್ರೊ ನಿಲ್ದಾಣದ ಸಿಬ್ಬಂದಿ ಹರಸಾಹಸಪಟ್ಟರು.
ಲಾಲ್‌ಬಾಗ್ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಬೀದಿ ವ್ಯಾಪಾರಿಗಳ ಹಾವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳ ಪಾದಚಾರಿ ಮಾರ್ಗದಲ್ಲಿ ಕಿರು ಮಾರುಕಟ್ಟೆಗಳೇ ಸೃಷ್ಟಿಯಾಗಿದ್ದವು.
Cut-off box - ಭಾನುವಾರ ಸಸ್ಯಕಾಶಿಗೆ ಭೇಟಿ ನೀಡಿದವರು ವಯಸ್ಕರು;105000 ಪಾಸ್ ಪಡೆದವರು ಮತ್ತು ಶಾಲಾ ಮಕ್ಕಳು; 20000 ಒಟ್ಟು;125000 ಸಂಗ್ರಹವಾದ ಹಣ;₹80.5 ಲಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.