ಬೆಂಗಳೂರು: ಪಾದಚಾರಿ ಮಾರ್ಗಗಳ ಅತಿಕ್ರಮಣ ಪ್ರಕರಣಗಳಲ್ಲಿ ಕ್ರಿಮಿನಲ್ ಕ್ರಮಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ದಂಡ ವಿಧಿಸುವ ಪ್ರಕ್ರಿಯೆ ಜಾರಿಗೊಳಿಸದ ಹೊರತು ನಿರ್ದೇಶನಗಳು ಕೇವಲ ಕಾಗದದಲ್ಲಿ ಉಳಿಯುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
‘ಪಾದಚಾರಿ ಮಾರ್ಗಗಳು ಮತ್ತು ಸಾರ್ವಜನಿಕ ಬೀದಿಗಳು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿರಬೇಕು. ಈ ನಿಯಮ ಉಲ್ಲಂಘನೆಯನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಸಹಿಸಬಾರದು. ನಿಬಂಧನೆಗಳನ್ನು ಅನುಷ್ಠಾನಗೊಳಿಸದೆ ಇರುವುದು ಸಂವಿಧಾನದ ಉಲ್ಲಂಘನೆ ಆಗಲಿದೆ’ ಎಂದು ಪೀಠ ಹೇಳಿತು.
ಆರ್.ಎಸ್.ರಾಮಚಂದ್ರರೆಡ್ಡಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಪಾದಚಾರಿ ಮಾರ್ಗಗಳ ಮೇಲೆಯೇ ನಿಲ್ಲಿಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕು’ ಎಂದು ಕೋರಿದ್ದರು.