ಬೆಂಗಳೂರು: ಶ್ರವಣ ಪರೀಕ್ಷೆಗೆ ಇಲ್ಲಿನ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಬ್ದ ರಹಿತ ಕೊಠಡಿ (ಆಡಿಯೋ ಮೆಟ್ರಿ ರೂಮ್) ನಿರ್ಮಿಸಿ, ಪರೀಕ್ಷೆ ಪ್ರಾರಂಭಿಸಲಾಗಿದೆ.
ಈ ಕೇಂದ್ರ ನಿರ್ಮಾಣದಿಂದ ನಿಖರ ಪರೀಕ್ಷೆ ಸಾಧ್ಯವಾಗಿದೆ. ಇಲ್ಲಿ ಪರೀಕ್ಷೆ ನಡೆಸುವ ಸಂಬಂಧ ಆಸ್ಪತ್ರೆಯು ಖಾಸಗಿ ವಾಕ್–ಶ್ರವಣ ಸಂಸ್ಥೆಯೊಂದರ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರದಂದು ಉಚಿತವಾಗಿ ಶ್ರವಣ ಪರೀಕ್ಷೆ ನಡೆಸಲಾಗುತ್ತಿದೆ. ₹ 6 ಲಕ್ಷದಲ್ಲಿ ಈ ಕೇಂದ್ರ ನಿರ್ಮಿಸಲಾಗಿದ್ದು, ಖಾಸಗಿ ಕೇಂದ್ರದ ಸಹಯೋಗದಲ್ಲಿ ಅತ್ಯಾಧುನಿಕ ಹಾಗೂ ಮುಂದುವರಿದ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗಿದೆ.
‘ಶ್ರವಣ ಪರೀಕ್ಷೆಯ ನಿಖರ ಫಲಿತಾಂಶಕ್ಕೆ ಶಬ್ದ ರಹಿತ ಕೊಠಡಿ ಸಹಕಾರಿ. ಸಾಮಾನ್ಯ ಕೊಠಡಿಗಳಲ್ಲಿ ಸುತ್ತಮುತ್ತಲಿನ ಶಬ್ದಗಳು ಕೇಳಿಸುವುದರಿಂದ ನಿಖರ ಫಲಿತಾಂಶ ದೊರೆಯುವುದಿಲ್ಲ. ಹೀಗಾಗಿ, ಕೊಠಡಿಯನ್ನು ಶಬ್ದ ರಹಿತ ಮಾಡಲಾಗಿದೆ. ಇಲ್ಲಿ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬಹುದು. ನವಜಾತ ಶಿಶುಗಳ ಶ್ರವಣ ಪರೀಕ್ಷೆಗೆ ಕೇಂದ್ರದಲ್ಲಿ ಆದ್ಯತೆ ನೀಡಲಾಗಿದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
‘6 ವರ್ಷದೊಳಗಿನ ಮಕ್ಕಳಿಗೆ ಗಂಭೀರ ಸ್ವರೂಪದ ಶ್ರವಣ ದೋಷ ಇದ್ದಲ್ಲಿ, ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಶಿಫಾಸರು ಮಾಡಲಾಗುವುದು. ಶ್ರವಣದೋಷ ಸಮಸ್ಯೆ ತಡೆಗೆ ನಿಯಮಿತ ಶ್ರವಣ ಪರೀಕ್ಷೆ ಅಗತ್ಯ. ನವಜಾತ ಶಿಶುಗಳು, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ ಸೇರಿ ವಿವಿಧ ಮುನ್ನೆಚ್ಚರಿಗೆ ಕ್ರಮಗಳಿಂದ ಶ್ರವಣದೋಷ ಸಮಸ್ಯೆ ತಡೆಯಲು ಸಾಧ್ಯ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.