ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವನ್ಯಜೀವಿ ಕಾರಿಡಾರ್‌ಗೆ ಹಣಕಾಸಿನ ಕೊರತೆ’

ಸಹಾಯ ಮಾಡಲು ಕಾರ್ಪೋರೇಟ್‌ ಸಂಸ್ಥೆಗಳಿಗೆ ಸಲಹೆ
Last Updated 25 ಏಪ್ರಿಲ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಮಾಜಿಕ ಹೊಣೆಗಾರಿಕೆ ಹೊತ್ತಿರುವ ಕಾರ್ಪೋರೇಟ್‌ ಸಂಸ್ಥೆಗಳು ಉದ್ಯಾನಗಳ ನಿರ್ಮಾಣಕ್ಕೆ ನೆರವು ನೀಡುವ ಬದಲಿಗೆ ಛಿದ್ರವಾಗುತ್ತಿರುವ ಕಾಡುಗಳಲ್ಲಿ ಪ್ರಾಣಿಗಳು ಓಡಾಡಲು ಕಾರಿಡಾರ್ ನಿರ್ಮಾಣ ಮತ್ತು ಅದರ ನಿರ್ವಹಣೆಗೆ ಮುಂದಾದರೆ ಉತ್ತಮ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಸಂಜಯ್‌ ಮೋಹನ್ ಅಭಿಪ್ರಾಯಪಟ್ಟರು.

ನೇಚರ್ ಕನ್ಸರ್‌ವೇಶನ್ ಫೌಂಡೇಷನ್ ಸಂಸ್ಥೆಯು ಆಯೋಜಿಸಿದ್ದ ‘ವನ್ಯಜೀವಿ ಕಾರಿಡಾರ್‌ಗಳ ಮಹತ್ವ’ ಸಂವಾದದಲ್ಲಿ ಅವರು ಮಾತನಾಡಿದರು.

‘ಕಾರಿಡಾರ್‌ಗಳ ಸೃಷ್ಟಿ ಬಹಳಷ್ಟು ಸಮಸ್ಯೆಗಳನ್ನು ತಂದಿಡುತ್ತಿದೆ. ಇದು ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರವಲ್ಲ. ಹಣಕಾಸು, ಸಾಮಾಜಿಕ ಹಾಗೂ ಬುಡಕಟ್ಟು ಸಂಸ್ಕೃತಿಗಳ ವಿಚಾರಕ್ಕೆ ಸಂಬಂಧಿಸಿದ್ದು. ಈ ಯೋಜನೆಗಾಗಿ ಬುಡಕಟ್ಟು ಸಮುದಾಯಗಳು ಜಾಗ ಬಿಟ್ಟುಕೊಡಬೇಕಾಗಿದೆ. ಬಿಟ್ಟುಕೊಟ್ಟ ಬಳಿಕ ಅಲ್ಲಿನ ಜನರಿಗೆ ಪುನರ್ವಸತಿ, ಪರಿಹಾರ ನೀಡಬೇಕು’ ಎಂದರು.

‘ಜಾಗ ಬಿಟ್ಟುಕೊಡಲು ಸದ್ಯದ ಮಾರುಕಟ್ಟೆ ಬೆಲೆ ನೀಡುವಂತೆ ಬುಡಕಟ್ಟು ಸಮುದಾಯದವರು ಬೇಡಿಕೆ ಇಡುತ್ತಿದ್ದಾರೆ. ಅಷ್ಟು ಹಣವನ್ನು ನೀಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಸಂಘ–ಸಂಸ್ಥೆಗಳು ಕಾರಿಡಾರ್‌ಗಳ ನಿರ್ಮಾಣ ಮತ್ತು ಜನರಿಗೆ ಪರಿಹಾರ ನೀಡಲು ಮುಂದೆ ಬರಬೇಕು’ ಎಂದು ಹೇಳಿದರು.

‘ಕಾರಿಡಾರ್‌ನಿಂದ ಪ್ರಾಣಿಗಳು ಆಹಾರಕ್ಕಾಗಿ ಅರಸುವುದು ತಪ್ಪಲಿದೆ. ಅವುಗಳ ಸಂತಾನೋತ್ಪತ್ತಿ ಹೆಚ್ಚಾಗಲಿದೆ. ಜನವಸತಿ ಪ್ರದೇಶಗಳಿಗೆ ಬರುವುದನ್ನು ತಡೆಗಟ್ಟಬಹುದು. ಹರಿದು ಹಂಚಿ ಹೋಗಿರುವ ಕಾಡನ್ನು ಮತ್ತೆ ಕೂಡಿಸಬಹುದು. ಒಂದು ಅರಣ್ಯ ಪ್ರದೇಶದಿಂದ ಮೊತ್ತೊಂದು ಅರಣ್ಯ ಪ್ರದೇಶಕ್ಕೆ ವಲಸೆ ಹೋಗಲು ಸಹಾಯವಾಗುತ್ತದೆ’ ಎಂದು ಹೇಳಿದರು.

ವನ್ಯಜೀವಿ ಸಂರಕ್ಷಕ ಸಂಜಯ್‌ ಗುಬ್ಬಿ, ‘ಮಲೆ ಮಹದೇಶ್ವರ ಬೆಟ್ಟ ಮತ್ತು ಬನ್ನೇರುಘಟ್ಟದಲ್ಲಿರುವ ಕಾರಿಡಾರ್‌ನಲ್ಲಿ ನೂರು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ ಅಧ್ಯಯನ ಮಾಡಿದ್ದೇವೆ. ಆನೆ, ಹುಲಿ, ಚಿರತೆಗಳು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೂ ಹೆಚ್ಚಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುತ್ತವೆ. ಇದರಿಂದ ಕಾರಿಡಾರ್‌ ಅವಶ್ಯಕ’ ಎಂದರು.

ಸಾಕ್ಷ್ಯಚಿತ್ರ ಪ್ರದರ್ಶನ
ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದ ಅರಣ್ಯಗಳು ಸಣ್ಣ ಭಾಗಗಳಾಗುತ್ತಿವೆ. ಇದರಿಂದ ಪ್ರಾಣಿಗಳು ಜನವಸತಿ ‍ಪ್ರದೇಶಗಳತ್ತ ದಾಪುಗಾಲಿಡುತ್ತಿವೆ. ಇದನ್ನು ತಪ್ಪಿಸಲು ಕಾಡಿನಲ್ಲಿ ವನ್ಯಜೀವಿ ಕಾರಿಡಾರ್‌ಗಳನ್ನು ನಿರ್ಮಿಸುವುದರ ಅಗತ್ಯದ ಬಗ್ಗೆ ಅರಿವು ಮೂಡಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಈ ಸಾಕ್ಷ್ಯಚಿತ್ರವನ್ನು ಸರವಣಕುಮಾರ್‌ ಅವರು ನಿರ್ದೇಶಿಸಿದ್ದಾರೆ. ಸಂಜಯ್ ಗುಬ್ಬಿ ಅವರ ಪರಿಕಲ್ಪನೆಯಡಿ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT