ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಬಿಟ್ಟು ಕದಲದ ಅರಣ್ಯ ಅಧಿಕಾರಿಗಳು

ಎರವಲು ಸೇವೆಯ ಗರಿಷ್ಠ ಅವಧಿ ಮುಗಿದರೂ ಮಾತೃ ಇಲಾಖೆಗೆತರಳದೆ ಪಾಲಿಕೆಯಲ್ಲೇ ಠಿಕಾಣಿ
Published : 21 ಆಗಸ್ಟ್ 2024, 23:46 IST
Last Updated : 22 ಆಗಸ್ಟ್ 2024, 0:34 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆಯ ಗರಿಷ್ಠ ಅವಧಿ ಮುಗಿದಿದ್ದರೂ ಕಾನೂನುಬಾಹಿರವಾಗಿ ಅರಣ್ಯ ಇಲಾಖೆಯ 11 ಅಧಿಕಾರಿಗಳು ಪಾಲಿಕೆಯಲ್ಲೇ ಉಳಿದಿದ್ದಾರೆ.

ಬಿಬಿಎಂಪಿ ಕಾಯ್ದೆ– 2020ರ ನಿಯೋಜನಾ ನೀತಿ ಅನ್ವಯ, ವಿವಿಧ ಇಲಾಖೆಗಳಿಂದ ಎರವಲು ಸೇವೆ ಮೇಲೆ ಪಾಲಿಕೆಗೆ ಬರುವವರ ಅವಧಿಯನ್ನು, ಮೊದಲ ಮೂರು ವರ್ಷ ಮತ್ತು ನಂತರ ಇನ್ನೆರಡು ವರ್ಷ ವಿಸ್ತರಣೆ ಸೇರಿದಂತೆ ಗರಿಷ್ಠ ಐದು ವರ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ, ಅರಣ್ಯ ಇಲಾಖೆಯಿಂದ 2015ರಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಇನ್ನೂ ವಾಪಸ್‌ ಹೋಗಿಲ್ಲ.

ಸರ್ಕಾರಿ ನೌಕರರ ನಿಯೋಜನೆ ಸುತ್ತೋಲೆಯಲ್ಲೂ ನಿಯೋಜನಾ ಅವಧಿಯನ್ನು ಐದು ವರ್ಷಗಳಿಗಿಂತ ಹೆಚ್ಚು ವಿಸ್ತರಿಸದಂತೆ ಸೂಚಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದರೂ, ವಿಶೇಷ ಆದೇಶಗಳಿದ್ದರೂ ಐದು ವರ್ಷಕ್ಕಿಂತ ಹೆಚ್ಚು ಅವಧಿ ಇರಬಾರದು. ಆದ್ದರಿಂದ, ನಿಯೋಜನೆ ಅವಧಿ ಪೂರ್ಣಗೊಂಡಿರುವ 11 ಮಂದಿಯನ್ನು ಮಾತೃ ಇಲಾಖೆಗೆ ವಾಪಸ್‌ ಕಳುಹಿಸಬೇಕು ಎಂದು ಬಿಬಿಎಂಪಿ ಆಡಳಿತದ ಉಪ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಮೇ 16ರಂದು ಪತ್ರ ಬರೆದಿದ್ದಾರೆ.

‘ಒಟ್ಟಾಗಿ 11 ಮಂದಿಯನ್ನೂ ವಾಪಸ್‌ ಕರೆಯಿಸಿಕೊಂಡರೆ ಬಿಬಿಎಂಪಿಯಲ್ಲಿ ಅರಣ್ಯ ವಿಭಾಗದ ಕೆಲಸಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಇವರ ಹುದ್ದೆಗೆ ಬೇರೆಯವರನ್ನು ನಿಯೋಜಿಸಿ, ಮಾತೃ ಇಲಾಖೆಗೆ ಹಿಂದಿರುಗಿಸಬೇಕು’ ಎಂದು ಉಪ ಆಯುಕ್ತರು ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಇಷ್ಟಾದರೂ ತಮ್ಮ ‘ಪ್ರಭಾವ’ದಿಂದ 11 ಮಂದಿ ಈವರೆಗೂ ಪಾಲಿಕೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಅರಣ್ಯ ಇಲಾಖೆಯಿಂದ ವಿನಯ್‌ ಕುಮಾರ್‌ ಹಾಗೂ ಶಿವಣ್ಣ ಅವರನ್ನು ಬಿಬಿಎಂಪಿಯ ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ಜೂನ್‌ 7ರಂದು ನಿಯೋಜಿಸಲಾಗಿದೆ. ಈ ಇಬ್ಬರು ಬಂದ ನಂತರ ಗರಿಷ್ಠ ಅವಧಿ ಪೂರೈಸಿರುವ 11 ಮಂದಿಯಲ್ಲಿ ಇಬ್ಬರಾದರೂ ಮಾತೃ ಇಲಾಖೆಗೆ ವಾಪಸ್‌ ಹೋಗಬೇಕಿತ್ತು. ಆದರೆ, 2015,  2018ರಿಂದ ಇರುವ ವಿ. ಚಂದ್ರಪ್ಪ, ಜಿ.ಆರ್‌. ಮಹೇಶ್‌, ನರೇಂದ್ರ ಬಾಬು ಅವರು ಇನ್ನೂ ಪಾಲಿಕೆಯಲ್ಲೇ ಉಳಿದುಕೊಂಡಿದ್ದಾರೆ.

ಅವಧಿ ಮೀರಿರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ. ಇನ್ನೂ ಉತ್ತರ ಬಂದಿಲ್ಲ
ಬಿ.ಎಸ್‌. ಮಂಜುನಾಥ ಸ್ವಾಮಿ, ಉಪ ಆಯುಕ್ತ (ಆಡಳಿತ), ಬಿಬಿಎಂಪಿ

‘ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೀರಿ ಬಿಬಿಎಂಪಿಯ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಾವಣೆ ಪಡೆದು ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ. 11 ಮಂದಿಯಲ್ಲಿ ಒಂಬತ್ತು ಮಂದಿ ಉಪ ವಲಯ ಅರಣ್ಯಾಧಿಕಾರಿಗಳಾಗಿದ್ದು (ಡಿಆರ್‌ಎಫ್‌ಒ), ಅವರೇ ವಲಯ ಅರಣ್ಯಾಧಿಕಾರಿಯ (ಆರ್‌ಎಫ್‌ಒ) ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಹೊಂದಿದ್ದಾರೆ’ ಎಂದು ಪಾಲಿಕೆಯಲ್ಲಿರುವ ಅರಣ್ಯ ಸಿಬ್ಬಂದಿಯೇ ದೂರುತ್ತಾರೆ.

‘ಅವಧಿ ಮೀರಿ ಬಿಬಿಎಂಪಿಯಲ್ಲಿರುವ ಸಿಬ್ಬಂದಿಯನ್ನು ಹಿಂಪಡೆಯಬೇಕು’ ಎಂದು  ಅರಣ್ಯ ಇಲಾಖೆಗೆ ನಗರಾಭಿವೃದ್ಧಿ ಇಲಾಖೆಯಿಂದ ಆಗಸ್ಟ್‌ 1ರಂದು ಮತ್ತೊಮ್ಮೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಾಗಿಲ್ಲ.

ಎರಡು ಹುದ್ದೆ!

‘ವಲಯ ಅರಣ್ಯಾಧಿಕಾರಿಗಳು ನಿಯೋಜನೆಗೊಂಡಿದ್ದರೂ, ಉಪ ವಲಯ ಅರಣ್ಯಾಧಿಕಾರಿಗಳಿಗೇ ಹೆಚ್ಚುವರಿಯಾಗಿ ವಲಯ ಅರಣ್ಯಾಧಿಕಾರಿ ಹುದ್ದೆಯ ಪ್ರಭಾರವನ್ನೂ ವಹಿಸಲಾಗಿದೆ. ಎರಡು ಹುದ್ದೆಯನ್ನು ಕಾನೂನುಬಾಹಿರವಾಗಿ ನಿರ್ವಹಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಸಿಬ್ಬಂದಿ ಆರೋಪಿಸುತ್ತಾರೆ.

‘ಬಿಬಿಎಂಪಿಯ ಇಲಾಖೆಗಳಲ್ಲಿ ಗರಿಷ್ಠ ಅವಧಿ ಮೀರಿದ್ದರೂ ಎರವಲು ಸೇವೆಯಲ್ಲಿ ಹಲವು ಅಧಿಕಾರಿಗಳು ಮುಂದುವರಿದಿದ್ದಾರೆ. ಅವರನ್ನೆಲ್ಲ ವಾಪಸ್‌ ಕಳುಹಿಸಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಒತ್ತಾಯಿಸಿದರು.‘ವಲಯ ಅರಣ್ಯಾಧಿಕಾರಿಗಳು ನಿಯೋಜನೆಗೊಂಡಿದ್ದರೂ, ಉಪ ವಲಯ ಅರಣ್ಯಾಧಿಕಾರಿಗಳಿಗೇ ಹೆಚ್ಚುವರಿಯಾಗಿ ವಲಯ ಅರಣ್ಯಾಧಿಕಾರಿ ಹುದ್ದೆಯ ಪ್ರಭಾರವನ್ನೂ ವಹಿಸಲಾಗಿದೆ. ಎರಡು ಹುದ್ದೆಯನ್ನು ಕಾನೂನುಬಾಹಿರವಾಗಿ ನಿರ್ವಹಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಸಿಬ್ಬಂದಿ ಆರೋಪಿಸುತ್ತಾರೆ.

‘ಬಿಬಿಎಂಪಿಯ ಇಲಾಖೆಗಳಲ್ಲಿ ಗರಿಷ್ಠ ಅವಧಿ ಮೀರಿದ್ದರೂ ಎರವಲು ಸೇವೆಯಲ್ಲಿ ಹಲವು ಅಧಿಕಾರಿಗಳು ಮುಂದುವರಿದಿದ್ದಾರೆ. ಅವರನ್ನೆಲ್ಲ ವಾಪಸ್‌ ಕಳುಹಿಸಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT