ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಗುಂಪುಗಳೀಗ ಕಂಪನಿ ರೂಪ

₹95 ಕೋಟಿ ವಹಿವಾಟು ನಡೆಸಿದ ರೈತರ ಉತ್ಪಾದಕ ಸಂಸ್ಥೆಗಳು; ಮಧ್ಯವರ್ತಿ ಹಾವಳಿಗೆ ಮುಕ್ತಿ
Last Updated 26 ಜೂನ್ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯವರ್ತಿಗಳಿಂದ ಮುಕ್ತಿ ನೀಡಲು ಸರ್ಕಾರ ಹುಟ್ಟು ಹಾಕಿದ ರೈತರ ಗುಂಪುಗಳು ಈಗ ₹95 ಕೋಟಿಯಷ್ಟು ವಹಿವಾಟು ನಡೆಸಿ ಕಂಪನಿ ರೂಪ ಪಡೆದುಕೊಂಡಿವೆ.

ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಮತ್ತು ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸುವ ದಿಸೆಯಲ್ಲಿ ತೋಟಗಾರಿಕೆ ಇಲಾಖೆ ರಚಿಸಿದ ರೈತರ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಲಿಮಿಟೆಡ್ ಕಂಪನಿಗಳಾಗಿವೆ.

2014–15ರಲ್ಲಿ ತೋಟಗಾರಿಕೆ ಇಲಾಖೆಮೊದಲ ಹಂತದಲ್ಲಿ55 ಸಂಸ್ಥೆಗಳನ್ನು ಆರಂಭಿಸಿತು. ಇಲಾಖೆ ವ್ಯಾಪ್ತಿಯಲ್ಲಿ ಸದ್ಯ 99 ಎಫ್‌ಪಿಒಗಳಿವೆ. ಇವುಗಳಲ್ಲದೇ ನಬಾರ್ಡ್‌, ಕೃಷಿ ಇಲಾಖೆ ವ್ಯಾಪ್ತಿ ಸೇರಿ ಒಟ್ಟು 300 ಎಫ್‌ಪಿಒಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಚ್‌.ಎಸ್. ಶಿವಕುಮಾರ್ ಹೇಳಿದರು.

ಏನಿದು ಎಫ್‌ಪಿಒ: 15ರಿಂದ 20 ಸಣ್ಣ ಮತ್ತು ಅತಿ ಸಣ್ಣ ರೈತರ ಗುಂಪುಗಳು ಹಳ್ಳಿಗಳಲ್ಲಿ ರಚನೆಯಾಗುತ್ತವೆ. ಈ ರೀತಿಯ 50 ಗುಂಪುಗಳು ಸೇರಿ ರಚನೆ ಮಾಡಿಕೊಳ್ಳುವ ಒಕ್ಕೂಟವೇ ಎಫ್‌ಪಿಒ.

‘ಉತ್ಪಾದಕ ಕಂಪನಿಗಳ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವ ಈ ಗುಂಪುಗಳು, ಟಿನ್ ನಂಬರ್ ಕೂಡ ಪಡೆದುಕೊಂಡಿವೆ. ರೈತರಿಗೆ ಬೇಕಾಗುವ ಬಿತ್ತನೆ ಬೀಜ, ಔಷಧಿ, ಕೃಷಿ ಪರಿಕರಗಳನ್ನು ಈ ಸಂಸ್ಥೆಯೇ ನೇರವಾಗಿ ಕಂಪನಿಗಳಿಂದಲೇ ಕಡಿಮೆ ದರದಲ್ಲಿ ಖರೀದಿ ಮಾಡುತ್ತಿವೆ ಮತ್ತು ಅದೇ ಬೆಲೆಗೆ ರೈತರಿಗೆ ಒದಗಿಸುತ್ತಿವೆ. ಬಳಿಕ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡಿ ನೇರವಾಗಿ ಗ್ರಾಹಕರಿಗೆ ದೊರಕುವಂತೆ ಮಾಡುತ್ತಿವೆ. ಬಿಗ್ ಬಜಾರ್, ಬಿಗ್ ಬ್ಯಾಸ್ಕೆಟ್‌ ಕಂಪನಿಗಳ ಸಂಪರ್ಕವನ್ನು ರೈತರಿಗೆ ಕೊಡಿಸಲಾಗಿದೆ’ ಎಂದು ಶಿವಕುಮಾರ್ ವಿವರಿಸಿದರು.

‘ಈ ಸಂಸ್ಥೆಗಳಿಗೆ ಆಡಳಿತ ಮಂಡಳಿಯನ್ನು ರೈತರೇ ಸೇರಿ ಮಾಡಿಕೊಳ್ಳುತ್ತಿದ್ದಾರೆ. ಚುನಾಯಿತರು ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಈ ಸಂಸ್ಥೆಗಳಿಗೆ ಬೇಕಿರುವ ತಾಂತ್ರಿಕ ತರಬೇತಿ, ಸಲಹೆಗಳನ್ನು ತೋಟಗಾರಿಕೆ ಇಲಾಖೆ ಆಗಾಗ ನೀಡುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಜತೆ ರೈತರನ್ನು ಜೋಡಣೆ ಮಾಡಲಾಗಿದೆ. ಅದರ ಭಾಗವಾಗಿ ರೈತರು ಮತ್ತು ವ್ಯಾಪಾರ ಸಂಸ್ಥೆಗಳ ಸಭೆಯನ್ನು ಬುಧವಾರ ನಡೆಸಲಾಯಿತು’ ಎಂದು ತಿಳಿಸಿದರು.

₹ 35 ಲಕ್ಷ ಪ್ರೋತ್ಸಾಹಧನ

ಹಳ್ಳಿಗಳಲ್ಲಿ ರೈತರ ಗುಂಪುಗಳನ್ನು ಹುಟ್ಟು ಹಾಕಿ ಒಂದು ಸಾವಿರ ರೈತರನ್ನು ಒಳಗೊಂಡ ಎಫ್‌ಪಿಒಗಳನ್ನು ಅಸ್ತಿತ್ವಕ್ಕೆ ತರಲು ತೋಟಗಾರಿಕೆ ಇಲಾಖೆ ಮೊದಲಿಗೆ ₹35 ಲಕ್ಷ ಪ್ರೋತ್ಸಾಹಧನ ನೀಡುತ್ತದೆ.

ಅವುಗಳ ವಹಿವಾಟು ಅಭಿವೃದ್ಧಿಗೆ ₹15 ಲಕ್ಷ ಮತ್ತು ಯಂತ್ರೋಪಕರಣಗಳ ಕೇಂದ್ರಕ್ಕೆ ₹22 ಲಕ್ಷ ಪ್ರೋತ್ಸಾಹಧನವನ್ನೂ ನೀಡುತ್ತಿದೆ ಎಂದು ಶಿವಕುಮಾರ್ ವಿವರಿಸಿದರು.

ರೈತರು–ವ್ಯಾಪಾರ ಸಂಸ್ಥೆಗಳ ಸಭೆ

ನಗರದಲ್ಲಿ ಬುಧವಾರ ನಡೆದ ರೈತರು ಮತ್ತು ವ್ಯಾಪಾರ ಸಂಸ್ಥೆಗಳ ಸಭೆಯನ್ನು ತೋಟಗಾರಿಕಾ ಸಚಿವಎಂ.ಸಿ.ಮನಗೂಳಿ ಉದ್ಘಾಟಿಸಿದರು.

‘ಎಲ್ಲಾ ರೈತರು ಒಂದೇ ರೀತಿಯ ಬೆಳೆ ಬೆಳೆಯದೆ ಮಣ್ಣು ಪರೀಕ್ಷೆ ಮಾಡಿಸಿ ಅದಕ್ಕೆ ಹೊಂದಿಕೆಯಾಗುವ ಬೆಳೆಯನ್ನೇ ಬೆಳೆಯಬೇಕು. ರಾಸಾಯನಿಕ ಗೊಬ್ಬರಕ್ಕೆ ಸೀಮಿತವಾಗದೆ ಸಾವಯವ ಗೊಬ್ಬರವನ್ನು ಪ್ರತಿ ಮೂರು ವರ್ಷಕ್ಕೊಮ್ಮೆಯಾದರೂ ಬಳಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT