ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರಾನ್ಸ್‌ ಕಂಪನಿ – ಪ್ರಧಾನಿ ಮೋದಿಗೆ ಉದ್ಯಮಿ ಅನಿಲ್‌ ಅಂಬಾನಿ ದಲ್ಲಾಳಿ’

ರಫೇಲ್‌ ಯುದ್ಧ ವಿಮಾನ ಖರೀದಿ: ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಆರೋಪ
Last Updated 30 ಆಗಸ್ಟ್ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ರಫೇಲ್‌ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ಉದ್ಯಮಿ ಅನಿಲ್‌ ಅಂಬಾನಿ ಫ್ರಾನ್ಸ್‌ನ ಕಂಪನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದಲ್ಲಾಳಿ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈಪಾಲ್ ರೆಡ್ಡಿ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಫೇಲ್‌ ವಿಮಾನ ಉತ್ಪಾದನೆ ಕೈ ತಪ್ಪಿದ್ದರಿಂದ ನಗರದ ಎಚ್ಎಎಲ್‌ ಕಂಪನಿಯ 10 ಸಾವಿರ ಕಾರ್ಮಿಕರಿಗೆ ಉದ್ಯೋಗ ನಷ್ಟವಾಗಿದೆ. ಅಲ್ಲದೆ, 10 ಸಾವಿರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶವೂ ತಪ್ಪಿದೆ’ ಎಂದರು.

‘ರಫೇಲ್‌ ಒಪ್ಪಂದದಿಂದ ದೇಶಕ್ಕೆ ₹ 41 ಸಾವಿರ ಕೋಟಿ ನಷ್ಟವಾಗಿದೆ. ಈ ವಿಮಾನ ಖರೀದಿ ಒಪ್ಪಂದ ಮತ್ತು ನೋಟು ರದ್ಧತಿ, ಎನ್‌ಡಿಎ ಸರ್ಕಾರದ ಅತಿ ದೊಡ್ಡ ಪ್ರಮಾದಗಳು’ ಎಂದು ಬಣ್ಣಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ರಫೇಲ್‌ ಖರೀದಿ ಒಪ್ಪಂದದಿಂದ ತಂತ್ರಜ್ಞಾನ ವರ್ಗಾವಣೆಯಾಗಿ 108 ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ಉತ್ಪಾದಿಸುವ ಅವಕಾಶ ಇತ್ತು. ಆದರೆ, ಪ್ರಧಾನಿ ಮೋದಿ ಈ ಒಪ್ಪಂದವನ್ನು ಬದಲಿಸಿ, 12 ದಿನಗಳ ಹಿಂದೆಯಷ್ಟೆ ನೋಂದಣಿಯಾಗಿದ್ದ ಅನಿಲ್‌ ಅಂಬಾನಿ ಒಡೆತನದ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಪ್ಪಂದ ರದ್ದಾಗಿ ತಮಗೆ ಅವಕಾಶ ಸಿಗುವ ಬಗ್ಗೆ ಅಂಬಾನಿಗೆ ಮೊದಲೇ ಗೊತ್ತಿತ್ತು’ ಎಂದರು.

‘ಪ್ರಧಾನಿ ಮೋದಿ ಸಂವಿಧಾನವನ್ನೂ ಮೀರಿ ವರ್ತಿಸುತ್ತಿದ್ದಾರೆ. ರಫೇಲ್‌ ಖರೀದಿ ಬಗ್ಗೆ ಮಾಹಿತಿ ಕೇಳಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಲೆಕ್ಕ ಕೊಟ್ಟಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡಾ ಉತ್ತರಿಸಲು ಸಿದ್ಧರಿಲ್ಲ. ಕೇಂದ್ರ ಸರ್ಕಾರ ನಮ್ಮ ಪ್ರಶ್ನೆಗೆ ಉತ್ತರ ನೀಡದೆ ಮರು ಪ್ರಶ್ನೆ ಹಾಕುತ್ತಿದೆ. ಈ ವಿಮಾನಗಳ ಖರೀದಿಗೆ ಯುಪಿಎ ಸರ್ಕಾರ ನಿಗದಿಪಡಿಸಿದ್ದ ಬೆಲೆ ಎಷ್ಟು, ಎನ್‌ಡಿಎ ಸರ್ಕಾರ ನಿಗದಿಪಡಿಸಿದ ಬೆಲೆ ಎಷ್ಟು ಎಂದು ತಿಳಿಸಬೇಕು’ ಎಂದೂ ಆಗ್ರಹಿಸಿದರು.

‘ಈ ವಿಷಯದ ಬಗ್ಗೆ ವಿಚಾರಣೆಗೆ ಜಂಟಿ ಸದನ ಸಮಿತಿ ರಚನೆಯಾದರೆ ಸತ್ಯಾಂಶ ಹೊರಬರುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸಮಿತಿ ರಚನೆಗೆ ಸಮ್ಮತಿಸಲಿಲ್ಲ’ ಎಂದು ರೆಡ್ಡಿ ದೂರಿದರು.

‘ರಕ್ಷಣಾ ಇಲಾಖೆಯಂಥ ಜವಾಬ್ದಾರಿ ನಿರ್ವಹಿಸಲು ಹಿರಿತನ ಮತ್ತು ಅನುಭವ ಮುಖ್ಯ. ಆದರೆ, ನಿರ್ಮಲಾ ಸೀತಾರಾಮನ್ ಅವರಿಗೆ ಅವರೆಡೂ ಇಲ್ಲ’ ಎಂದು ಆರೋಪಿಸಿದ ರೆಡ್ಡಿ, ‘ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಇಂಧನ ಬೆಲೆ ಮತ್ತಷ್ಟು ದುಬಾರಿಯಾಗುವಂತೆ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT