ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ನಗರದಲ್ಲಿ ಕಾರ್ಮಿಕ ವಂಚನೆ ಪ್ರಕರಣ ಹೆಚ್ಚಳ

ಇಂಡಿಯಾ ಲೇಬರ್ ಲೈನ್‌ ಸಹಾಯವಾಣಿಗೆ 2,780 ದೂರು
Published 23 ನವೆಂಬರ್ 2023, 0:30 IST
Last Updated 23 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಾರ್ಮಿಕ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಾರ್ಮಿಕರಿಗಾಗಿಯೇ ರೂಪಿಸಿರುವ ‘ಇಂಡಿಯಾ ಲೇಬರ್ ಲೈನ್’ ಸಹಾಯವಾಣಿಯಡಿ 2,780 ದೂರುಗಳು ದಾಖಲಾಗಿವೆ.

ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವರ್ಕಿಂಗ್ ಪೀಪಲ್ಸ್ ಚಾರ್ಟರ್ (ಡಬ್ಲ್ಯುಪಿಸಿ) ಮತ್ತು ಆಜೀವಿಕ ಬ್ಯೂರೊ ಸಂಸ್ಥೆ ಜಂಟಿಯಾಗಿ 2021ರ ಜುಲೈನಲ್ಲಿ ಈ ಸಹಾಯವಾಣಿ ಪ್ರಾರಂಭಿಸಿವೆ. ಇದಕ್ಕೆ ಪ್ರತಿನಿತ್ಯ ಸರಾಸರಿ 10ರಿಂದ 15 ಕರೆಗಳು ಕಾರ್ಮಿಕರಿಂದ ಬರುತ್ತಿವೆ. ಇಂಡಿಯಾ ಲೇಬರ್ ಲೈನ್ ತಂಡವು ಅವುಗಳಲ್ಲಿನ ಸತ್ಯಾಸತ್ಯತೆ ಪರಿಶೀಲಿಸಿ, ದೂರುಗಳನ್ನು ದಾಖಲಿಸಿಕೊಳ್ಳುತ್ತಿದೆ. ಈ ತಂಡವು ವಕೀಲರು ಸೇರಿ ಕ್ಷೇತ್ರ ತಜ್ಞರನ್ನು ಒಳಗೊಂಡಿದೆ. 

2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ವಿವಿಧ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಸರ್ಕಾರವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಹಲವರು ಕೆಲಸ ಕಳೆದುಕೊಂಡಿದ್ದರು. ಆ ವೇಳೆ ವೇತನ ವಂಚನೆಯಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದ್ದವು. ಹಲವರಿಗೆ ಬಾಕಿ ವೇತನ ಪಾವತಿಯಾಗಿರಲಿಲ್ಲ. ಹೀಗಾಗಿ, ಇಂಡಿಯಾ ಲೇಬರ್ ಲೈನ್ ಸಹಾಯವಾಣಿಯನ್ನು ಪ್ರಾರಂಭಿಸಲಾಗಿತ್ತು. ಸದ್ಯ ದೇಶದ 16 ನಗರಗಳಲ್ಲಿ ಈ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. 

ವೇತನಕ್ಕೆ ಮನವಿ:

ನಗರದಲ್ಲಿ ನೆಲೆಸಿರುವ ಕಾರ್ಮಿಕರಲ್ಲಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡಿದ್ದಾರೆ. ಮಾಲೀಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವೇತನ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

‘ಸಹಾಯವಾಣಿಗೆ ಕರೆ ಮಾಡಿದ ಕಾರ್ಮಿಕರಿಗೆ ಕಾನೂನು ಸೇರಿ ಎಲ್ಲ ರೀತಿಯ ನೆರವನ್ನು ಒದಗಿಸಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಮಾಲೀಕರು ಹಾಗೂ ಗುತ್ತಿಗೆದಾರರ ಭಯದ ಕಾರಣ ಕಾರ್ಮಿಕರು ದೂರನ್ನು ವಾಪಸ್ ಪಡೆಯುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡು ಇತ್ಯರ್ಥ ಮಾಡಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕಾನೂನಿನ ಅಡಿ ಇತ್ಯರ್ಥ ಮಾಡಿಸಲಾಗಿದೆ. ಎಲ್ಲ ಸೇವೆಯೂ ಉಚಿತವಾಗಿದ್ದು, ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಸಹಾಯವಾಣಿಯ ಸಹಾಯಕ ರಾಜ್ಯ ಸಂಯೋಜಕಿ ಗಾಯತ್ರಿ ರಘು ಕುಮಾರ್ ತಿಳಿಸಿದರು.

1,160 ದೂರು ಇತ್ಯರ್ಥ

ಇಂಡಿಯಾ ಲೇಬರ್ ಲೈನ್ ಸಹಾಯವಾಣಿಯಡಿ ಈಗಾಗಲೇ ದಾಖಲಾದ ದೂರುಗಳಲ್ಲಿ 1,160 ದೂರುಗಳನ್ನು ಕಾನೂನಿನ ಅಡಿ ಇತ್ಯರ್ಥಗೊಳಿಸಲಾಗಿದ್ದು, ₹ 2.62 ಕೋಟಿ ಹಣವನ್ನು ಕಾರ್ಮಿಕರಿಗೆ ಮರಳಿಸಲಾಗಿದೆ. ಭವಿಷ್ಯ ನಿಧಿ (ಪಿಎಫ್‌) ಮತ್ತು ಗ್ರಾಚ್ಯುಟಿ (ಉಪಧನ) ಸಮಸ್ಯೆ, ವೇತನ ತಾರತಮ್ಯ, ಕೆಲಸದ ಸ್ಥಳದಲ್ಲಿ ಹಿಂಸೆ, ಅಧಿಕ ಅವಧಿ ದುಡಿಮೆ, ಅಪಘಾತ ಪರಿಹಾರ ನಿರಾಕರಣೆ ಹಾಗೂ ವೇತನ ವಿಳಂಬದ ಬಗ್ಗೆ ಹೆಚ್ಚಿನ ಕಾರ್ಮಿಕರು ಸಹಾಯವಾಣಿ ಸಂಪರ್ಕಿಸಿದ್ದಾರೆ. 

ಯಾರೆಲ್ಲ ಕರೆ ಮಾಡಬಹುದು?

‘ಅಸಂಘಂಟಿತ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ, ಮನೆ ಕೆಲಸ, ಸ್ವಚ್ಛತೆ, ಗಾರ್ಮೆಂಟ್ಸ್‌, ಸಣ್ಣ ಕೈಗಾರಿಕೆಗಳು, ಕಾರ್ಖಾನೆಗಳು, ಭದ್ರತೆ, ಸೇವಾ ವಲಯಗಳಾದ ನರ್ಸಿಂಗ್, ಹೋಮ್ ನರ್ಸಿಂಗ್ ಹಾಗೂ ಇನ್ನಿತರೆ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಸುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡಬಹುದು. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಸಹಾಯವಾಣಿ ಸಕ್ರಿಯವಾಗಿ ಇರಲಿದೆ. ಬೇರೆ ಅವಧಿಯಲ್ಲಿ ಕರೆ ಮಾಡಿದರೂ, ಕಾರ್ಯಾವಧಿಯಲ್ಲಿ ಸಂಪರ್ಕಿಸಲಾಗುತ್ತದೆ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಹಾಯವಾಣಿಯನ್ನೂ ರೂಪಿಸಲಾಗಿದೆ’ ಎಂದು ಸಹಾಯವಾಣಿಯ ರಾಜ್ಯ ಸಂಯೋಜಕ ಮುನಿರಾಜು ಟಿ. ತಿಳಿಸಿದರು. 

ಉಚಿತ ಸಹಾಯವಾಣಿ ಸಂಖ್ಯೆ: 18008339020, ಬೆಂಗಳೂರು ನಗರದ ಸಹಾಯವಾಣಿ: 080 46805780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT