ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಅಪರಾಧ ನಿಯಂತ್ರಣಕ್ಕೆ ‘ಎಫ್‌ಆರ್‌ಎಸ್‌’ ನೆರವು

ಪ್ರಾಯೋಗಿಕ ಅನುಷ್ಠಾನ: ಎಐ ತಂತ್ರಜ್ಞಾನವುಳ್ಳ 1,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಚೇತನ್‌ ಬಿ.ಸಿ.
Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಸೇಫ್‌ ಸಿಟಿ’ ಯೋಜನೆಯಡಿ ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿರುವ ಮುಖಚಹರೆ ಗುರುತಿಸುವ ವ್ಯವಸ್ಥೆ (ಎಫ್‌ಆರ್‌ಎಸ್‌) ಬೀದಿಗಳಲ್ಲಿ ನಡೆಯುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರಿಗೆ ನೆರವಾಗುತ್ತಿದೆ.

ಈ ಯೋಜನೆಯಡಿ ನಗರದ ವಿವಿಧೆಡೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವುಳ್ಳ 1,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಕಳೆದ 90 ದಿನಗಳ ಅವಧಿಯಲ್ಲಿ ಅಪರಾಧ ಹಿನ್ನೆಲೆಯ 2.5 ಲಕ್ಷ ವ್ಯಕ್ತಿಗಳನ್ನು ಗುರುತಿಸಿವೆ. ಈ ಕ್ಯಾಮೆರಾಗಳಲ್ಲಿ ಸೆರೆಸಿಕ್ಕ ಫೋಟೊಗಳ ನೆರವಿನಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಿರುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ನಗರದ ವಿವಿಧೆಡೆ ಅಳವಡಿಸಿರುವ ಕ್ಯಾಮೆರಾಗಳನ್ನು ಪೊಲೀಸ್‌ ಕಮಾಂಡ್‌ ಕೇಂದ್ರದಲ್ಲಿರುವ ಎಫ್‌ಆರ್‌ಎಸ್‌ ಘಟಕದ ಜೊತೆ ಜೋಡಿಸಲಾಗಿದೆ. ಪೊಲೀಸರು ಈಗ ಹೊಸ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದ್ದಾರೆ.

‘ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ದತ್ತಾಂಶ ಮತ್ತು ಎಫ್‌ಆರ್‌ಎಸ್‌ ಕ್ಯಾಮೆರಾಗಳು ಸೆರೆಹಿಡಿಯುವ ವ್ಯಕ್ತಿಗಳ ಭಾವಚಿತ್ರವನ್ನು ತಾಳೆಮಾಡಿ, ನಿಖರ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ರೂಪಿಸಬೇಕಿದೆ. ಇದಕ್ಕಾಗಿ ಮುಖಚಹರೆ ಗುರುತಿಸುವ ಎರಡು ಸಾಫ್ಟ್‌ವೇರ್‌ಗಳನ್ನು ಕಮಾಂಡ್‌ ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತಿದೆ. ಯಾವುದು ಉತ್ತಮವೋ ಅದನ್ನು ಅಳವಡಿಸಿಕೊಳ್ಳುತ್ತೇವೆ’ ಎಂದು ನಗರ ಪೊಲೀಸ್ ಕಮಿಷನರ್‌ ಬಿ. ದಯಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನಿಖರವಾಗಿ ಗುರುತಿಸುವ (ಎಎನ್‌ಪಿಆರ್‌) ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಅದೇ ಮಾದರಿಯಲ್ಲಿ ಎಫ್‌ಆರ್‌ಎಸ್‌ ಅನ್ನೂ ಮೇಲ್ದರ್ಜೆಗೇರಿಸುವ ಗುರಿ ಪೊಲೀಸರ ಮುಂದಿದೆ ಎಂದರು.

ಒಟ್ಟು 7,500 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ಪೈಕಿ 1,000 ಕ್ಯಾಮೆರಾಗಳ ಬಳಕೆಗೆ ಮಾತ್ರ ‘ಸಾಫ್ಟ್‌ವೇರ್‌ ಲೈಸೆನ್ಸ್‌’ ಇದೆ. ಒಂದು ಬಾರಿಗೆ 1,000 ಕ್ಯಾಮೆರಾಗಳನ್ನು ಬಳಸಬಹುದು. ಆ ಕ್ಯಾಮೆರಾಗಳನ್ನು ಬೇಕಾದ ದಿಕ್ಕಿಗೆ ತಿರುಗಿಸಿ ಚಿತ್ರ ಸೆರೆಹಿಡಿಯಬಹುದು ಎನ್ನುತ್ತಾರೆ ‍ಪೊಲೀಸರು.

‘40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಕೊರಟಗೆರೆ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಇತ್ತೀಚೆಗೆ ನಗರದಲ್ಲಿ ಸೆರೆ ಹಿಡಿದಿದ್ದರು. ಎಫ್‌ಆರ್‌ಎಸ್‌ ವ್ಯವಸ್ಥೆಯ ನೆರವಿನಲ್ಲೇ ಅವರು ಆರೋಪಿಯನ್ನು ಪತ್ತೆಹಚ್ಚಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಾರ್ಯಾಚರಣೆಯ ವಿಧಾನ ಹೇಗೆ?
ಎಐ ತಂತ್ರಜ್ಞಾನವುಳ್ಳ ಕ್ಯಾಮೆರಾಗಳನ್ನು ಎಫ್‌ಆರ್‌ಎಸ್‌ ಘಟಕಕ್ಕೆ ಜೋಡಿಸ ಲಾಗಿದೆ. ಅಲ್ಲಿ ಮುಖ ಚಹರೆ ಗುರುತಿಸುವ ತಂತ್ರಾಂಶದ ಜೊತೆ ರಾಜ್ಯ ಅಪರಾಧ ದಾಖಲೆಗಳ ಬ್ಯೂರೊದ ದತ್ತಾಂಶವನ್ನು ಜೋಡಿಸಲಾಗಿದೆ. ಅಪರಾಧ ಚಹರೆಯ ವ್ಯಕ್ತಿಗಳ ಭಾವಚಿತ್ರ ಸೆರೆಯಾಗುತ್ತಿದ್ದಂತೆಯೇ ಎಫ್ಆರ್‌ಎಸ್‌ ವ್ಯವಸ್ಥೆ ಕ್ಷಿಪ್ರ ಕಾರ್ಯಾಚರಣೆ ‍ಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT