ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ನೌಕರರ ಬೇಡಿಕೆ ಈಡೇರಿಕೆ: ಪ್ರತಿಭಟನೆ ವಾಪಸ್‌

ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಂದ ಭರವಸೆ
Published 1 ಮಾರ್ಚ್ 2024, 21:30 IST
Last Updated 1 ಮಾರ್ಚ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಹುತೇಕ ಬೇಡಿಕೆಗಳನ್ನು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಈಡೇರಿಸಿದ್ದು, ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದಾರೆ.

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ರಜೆ ಹಾಕಿದ ಪಾಲಿಕೆ ಸಿಬ್ಬಂದಿ, ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ತುಷಾರ್‌ ಗಿರಿನಾಥ್‌ ಕೆಲವು ಆದೇಶಗಳನ್ನು ಪ್ರಕಟಿಸಿದರು. ಜೊತೆಗೆ ಒಂದೆರಡು ದಿನಗಳಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದರು.

ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಕೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಇಂಗ್ಲಿಷ್ ಅಕ್ಷರಗಳನ್ನು ಕಡೆವಿದ್ದಕ್ಕೆ ಹಿರಿಯ ಆರೋಗ್ಯ ಅಧಿಕಾರಿ ಕೆ.ಎಲ್‌. ವಿಶ್ವನಾಥ್‌ ಅವರನ್ನು ಮಹದೇವಪುರ ಜಂಟಿ ಆಯುಕ್ತರು ಅಮಾನತು ಮಾಡಿದ್ದರು. ಈ ಅಮಾನತು ಆದೇಶ ವಾಪಸ್ ಪಡೆಯಲು ಒತ್ತಾಯಿಸಲಾಗಿತ್ತು. ಅದರಂತೆ ಸಂಜೆ ವೇಳೆಗೆ ಅಮಾನತು ಆದೇಶ ವಾಪಸ್ ಆಗಿದೆ.

ಆರ್.ಆರ್. ನಗರ ವಲಯದಲ್ಲಿದ್ದ ಆರೋಗ್ಯ ವೈದ್ಯಾಧಿಕಾರಿ ಡಾ. ದೇವಿಕಾರಾಣಿ ಅವರ ಸ್ಥಳಕ್ಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ಬೇರೆ ಆರೋಗ್ಯ ವೈದ್ಯಾಧಿಕಾರಿಯನ್ನು ನೇಮಿಸಲಾಗಿತ್ತು. ದೇವಿಕಾರಾಣಿ ಅವರಿಗೆ ಸ್ಥಳ ತೋರಿಸಿರಲಿಲ್ಲ. ಅವರನ್ನು ನಿಯೋಜಿಸಬೇಕೆಂಬ ಸಂಘದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಬಸವನಗುಡಿಗೆ ನಿಯೋಜಿಸಿ ಆದೇಶಿಸಲಾಗಿದೆ.

ಕಂದಾಯ ವಿಭಾಗದಲ್ಲಿ ಆಸ್ತಿ ತೆರಿಗೆ ಸಂಗ್ರಹದ ವಿಚಾರದಲ್ಲಿ ಹಲವರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಲಾಗಿತ್ತು. ಅವುಗಳನ್ನು ವಾಪಸ್‌ ಪಡೆಯುವುದಾಗಿ ತುಷಾರ್‌ ಗಿರಿನಾಥ್‌ ಹೇಳಿದರು. ಅಲ್ಲದೆ, ಬಡ್ತಿಯಾಗಿ ಸ್ಥಳ ನಿರೀಕ್ಷಣೆಯಲ್ಲಿದ್ದ ಕಂದಾಯ ವಿಭಾಗದ 10 ಮಂದಿಗೆ ಸ್ಥಳ ನಿಯೋಜಿಸಿ ಆದೇಶಿಸಲಾಗುತ್ತದೆ ಎಂದು ಭರವಸೆ ನೀಡಿದರು.

‘ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿ, ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದಾರೆ. ಅದರಂತೆ ನಾವು ನಮ್ಮ ಹೋರಾಟವನ್ನು ನಿಲ್ಲಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ತಿಳಿಸಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT