ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಲಹಳ್ಳಿ ಗ್ರಾ.ಪಂಗೆ ‘ಗಾಂಧಿ ಪುರಸ್ಕಾರ’

Published 28 ಸೆಪ್ಟೆಂಬರ್ 2023, 0:11 IST
Last Updated 28 ಸೆಪ್ಟೆಂಬರ್ 2023, 0:11 IST
ಅಕ್ಷರ ಗಾತ್ರ

ಕೆ.ಆರ್.ಪುರ: ಪಂಚಾಯತ್ ರಾಜ್ ಇಲಾಖೆ ನೀಡುವ ಪ್ರಸಕ್ತ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಪೂರ್ವ ತಾಲ್ಲೂಕಿನ ಆವಲಹಳ್ಳಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಜೀವನಮಟ್ಟ ಸುಧಾರಣೆ, ಸಂಪನ್ಮೂಲ ಕ್ರೋಡೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಅಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯ ಯೋಜನೆಗಳ ಮಾನದಂಡಗಳಡಿ ಗ್ರಾಮ ಪಂಚಾಯಿತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ ಆವಲಹಳ್ಳಿ ಗ್ರಾಮ ಪಂಚಾಯಿತಿ ಆವಲಹಳ್ಳಿ, ಚೀಮಸಂದ್ರ, ವೀರೇನಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ. ಈ ಗ್ರಾಮಗಳಲ್ಲಿ ಮೂಲ ಸೌಕರ್ಯ, ಕಸ ನಿರ್ವಹಣೆ, ಗ್ರಾಮಸಭೆ, ಕರ ನಿರ್ವಹಣೆಯಂತಹ ಕೆಲಸಗಳನ್ನು ಸಮರ್ಪಕವಾಗಿ ಕೈಗೊಳ್ಳುವ ಮೂಲಕ ಜನಮನ್ನಣೆ ಗಳಿಸಿದೆ.

ಆವಲಹಳ್ಳಿ, ಚೀಮಸಂದ್ರ, ವೀರೇನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಕೆರೆ ನಿರ್ವಹಣೆ, ಕೆರೆ–ಕಟ್ಟೆಗಳ ದಡಗಳಲ್ಲಿ ಗಿಡ‌ಗಳನ್ನು ನೆಡುವುದು, ಕರವಸೂಲಿ, ಚರಂಡಿ ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಸರ್ಕಾರಿ ಸ್ವಾಮ್ಯದ ಕಟ್ಟಡಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವುದು ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಪಂಚಾಯಿತಿ ಸಮರ್ಪಕವಾಗಿ ಅನುಷ್ಠಾನಗೊಳಿಸಿತ್ತು. ಈಗಲೂ ಆ ಅಭಿವೃದ್ಧಿ ಕಾರ್ಯಗಳು ಮುಂದುವರಿದಿವೆ.

‘ಗ್ರಾಮಸಭೆ, ಕಸ ನಿರ್ವಹಣೆಯಂತ ಕೆಲಸಗಳನ್ನು ಹಂತಹಂತವಾಗಿ ಮಾಡುತ್ತ ಬರಲಾಗುತ್ತಿದೆ. ಗ್ರಾಮಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸತತವಾಗಿ ಶ್ರಮಿಸಲಾಗುತ್ತದೆ’ ಎಂದು ಆವಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಮರೇಶ ಹೇಳಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನರೇಗಾ ಕಾಮಗಾರಿಗಳ ಅನುದಾನ ಬಳಕೆ, ಸರ್ಕಾರಿ ದಾಖಲೆಗಳ ನಿರ್ವಹಣೆ, ಗ್ರಾಮ ಸಭೆ, ಸ್ವಸಹಾಯ ಸಂಘಗಳಿಗೆ ಸಹಾಯ ಹಸ್ತ, ಎಸ್ಸಿ, ಎಸ್ಟಿ ಹಾಗೂ ಅಂಗವಿಕಲರಿಗೆ ಅಗತ್ಯ ಸೌಕರ್ಯ ಒದಗಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಣೆ ತರಲು ಗ್ರಾಮ ಪಂಚಾಯಿತಿ ಶ್ರಮಿಸಿದೆ. ಈ ಸಾಧನೆಯನ್ನು ಪರಿಗಣಿಸಿ ಆವಲಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಂಚಾಯತ್‌ರಾಜ್ ಇಲಾಖೆಯು ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಆವಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀತಾ ತೇಜಗೌಡ ಪ್ರತಿಕ್ರಿಯಿಸಿದರು.

ಆವಲಹಳ್ಳಿಯಲ್ಲಿ ಕಲ್ಯಾಣಿ ನಿರ್ಮಾಣ ಮಾಡಿರುವುದು
ಆವಲಹಳ್ಳಿಯಲ್ಲಿ ಕಲ್ಯಾಣಿ ನಿರ್ಮಾಣ ಮಾಡಿರುವುದು
ಚೀಮಸಂದ್ರದಲ್ಲಿ ಗಿಡ ನೆಡುವ ಕಾರ್ಯಕ್ರಮ
ಚೀಮಸಂದ್ರದಲ್ಲಿ ಗಿಡ ನೆಡುವ ಕಾರ್ಯಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT