ಶುಕ್ರವಾರ, ಅಕ್ಟೋಬರ್ 23, 2020
22 °C
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತ್ಯುತ್ಸವ * ಸಂವಾದ, ಜಾಥಾ, ಚರ್ಚೆ ಮೂಲಕ ಸ್ಮರಣೆ

ಶಾಂತಿದೂತ ಬಾಪುವಿಗೆ ಸಹಸ್ರ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳ ಚರ್ಚೆ ಮಾಡುವ, ಅವರ ಸಂದೇಶವನ್ನು ಜನರಿಗೆ ತಲುಪಿಸುವ ಮೂಲಕ ನಗರದಲ್ಲಿ ಶುಕ್ರವಾರ ರಾಷ್ಟ್ರಪಿತನ 151ನೇ ಜಯಂತ್ಯುತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. 

ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ, ವಿಶ್ವವಿದ್ಯಾಲಯಗಳು, ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. 

ರಾಜಭವನದಲ್ಲಿ ನಡೆದ ‘ಸತ್ಯ ಮತ್ತು ಅಹಿಂಸಾ ಮಹೋತ್ಸವ’ವನ್ನು ರಾಜ್ಯಪಾಲ ವಜುಭಾಯಿ ವಾಲಾ, ಗಾಂಧೀಜಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಸಂವಾದ: ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗಾಂಧಿ ಜಯಂತಿ ನಿಮಿತ್ತ ‘ಸಾಮಾಜಿಕ ಮೌಲ್ಯಗಳ ಕುಸಿತ ಹಾಗೂ ಅದರ ಪರಿಣಾಮಗಳು’ ಕುರಿತು ಸಂವಾದ ಏರ್ಪಡಿಸಲಾಗಿತ್ತು. 

ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ‘ನ್ಯಾಯಾಲಯಗಳು ತ್ವರಿತವಾಗಿ ನ್ಯಾಯದಾನ ಮಾಡುವ ಮೂಲಕ ಪ್ರಜೆಗಳ ಹಕ್ಕುಗಳನ್ನು ಎತ್ತಿಹಿಡಿಯಬೇಕಾಗಿದೆ. ನ್ಯಾಯದಾನ ವಿಳಂಬವಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತದೆ’ ಎಂದರು. 

ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ, ‘ಗಾಂಧೀಜಿ ಕಂಡಂತಹ ಕನಸು ನನಸಾಗಲು ಸಾಮಾಜಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದರು.

ಅಹಿಂಸೆಯು ಶಿಕ್ಷಣದ ತಳಹದಿಯಾಗಲಿ: ‘ಅಹಿಂಸೆಯು ಶಿಕ್ಷಣದ ತಳಹದಿಯಾಗಬೇಕು. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸಬೇಕು ಎಂಬುದು ಮಹಾತ್ಮ ಗಾಂಧಿಯವರ ಪ್ರಮುಖ ತತ್ವಗಳಾಗಿದ್ದವು. ನಮ್ಮ ಶಿಕ್ಷಕರುಈ ತತ್ವಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಅವರಂತೆ ಸತ್ಯ ಮತ್ತು ಅಹಿಂಸೆಗಳೊಂದಿಗೆ ಬದುಕಲು ಮಾರ್ಗದರ್ಶನ ನೀಡಬೇಕು’ ಎಂದು ಬೆಂಗಳೂರು ನಗರ (ಕೇಂದ್ರ) ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್. ಜಾಫೆಟ್ ಹೇಳಿದರು. 

ಕುಲಸಚಿವ (ಮೌಲ್ಯಮಾಪನ) ಡಾ. ಶಿವರಾಂ, ವಿತ್ತಾಧಿಕಾರಿಗಳಾದ ಬಿ. ರಮೇಶ್, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಗೋವಿಂದ ಗೌಡ ಎಚ್.ಜಿ, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಇದ್ದರು.

ಕಾಂಗ್ರೆಸ್‌ ಕಚೇರಿ: ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಾಂಧೀಜಿ ಜಯಂತ್ಯುತ್ಸವ ಆಚರಿಸಲಾಯಿತು. ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿಯವರಿಗೂ ಪುಷ್ಪನಮನ ಸಲ್ಲಿಸಲಾಯಿತು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡ ಕೆ.ಎಚ್. ಮುನಿಯಪ್ಪ, ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಎಂ.ನಾರಾಯಣ ಸ್ವಾಮಿ, ನಸೀರ್ ಅಹ್ಮದ್, ಯು.ಬಿ‌.ವೆಂಕಟೇಶ್, ವಿ.ಎಸ್.ಉಗ್ರಪ್ಪ, ಸಯೀದ್ ಅಹ್ಮದ್, ಪುಷ್ಪಾ ಅಮರನಾಥ್, ಮಂಜುನಾಥ್‌ ಇತರರು ಇದ್ದರು.

ಬಿಜೆಪಿ ಕಚೇರಿಯಲ್ಲಿ ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು