ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಶೆಟ್ಟಿಹಳ್ಳಿ ಕೆರೆ: 400 ಕುಟುಂಬಗಳ ತೆರವಿಗೆ ಬಿಬಿಎಂಪಿ ಪತ್ರ

Published 22 ಜನವರಿ 2024, 23:30 IST
Last Updated 22 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೂರ್ವಭಾಗದಲ್ಲಿರುವ ಗಂಗಶೆಟ್ಟಿಹಳ್ಳಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡು 30 ವರ್ಷಗಳಿಂದ ವಾಸಿಸುತ್ತಿರುವ 400ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಬೇಕೆಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಬಿಬಿಎಂಪಿ ಪತ್ರ ಬರೆದಿದೆ.

ಕೆರೆಯಲ್ಲಿ ಸುಮಾರು 3 ಎಕರೆ ಒತ್ತುವರಿ ಮಾಡಿಕೊಂಡಿರುವವರಿಗೆ ಪುನರ್ವತಿ ಕಲ್ಪಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಕೆ.ಆರ್. ಪುರದಲ್ಲಿರುವ ಈ ಕೆರೆಯಲ್ಲಿ 14 ಒತ್ತುವರಿದಾರರಿದ್ದು, ಕೆರೆ ಮಾಲೀಕತ್ವ ಹೊಂದಿರುವ ಕಂದಾಯ ಇಲಾಖೆಯೂ ಒತ್ತುವರಿ ಮಾಡಿಕೊಂಡು ತಹಶೀಲ್ದಾರ್‌ ಕಚೇರಿ ನಿರ್ಮಿಸಿದೆ.

ಜಿಲ್ಲಾಡಳಿತಕ್ಕೂ ಪತ್ರ ಬರೆದಿರುವ ಬಿಬಿಎಂಪಿ, ಗಂಗಶೆಟ್ಟಿಹಳ್ಳಿ ಕೆರೆಯಲ್ಲಿರುವ ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದೆ. ಕೆ.ಆರ್‌. ಪುರದ ಶಾಸಕ ಬೈರತಿ ಬಸವರಾಜು ಅವರು ಕೆರೆಯ ಗಡಿಯನ್ನು ಗುರುತಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಹೊಸಕೋಟೆ ಬಳಿಯ ಮೇಡಹಳ್ಳಿಯಲ್ಲಿ ಒಂದು ಎಕರೆಯಲ್ಲಿ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಧಿಕಾರಿ ಸ್ಥಳ ಗುರುತಿಸಿದ್ದಾರೆ. ಮುಂದಿನ ಮಂಡಳಿ ಸಭೆಯಲ್ಲಿ ವಸತಿ ಕಲ್ಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ. ವೆಂಕಟೇಶ್‌ ಹೇಳಿದರು.

‘ನಾವು 1992ರಿಂದ ಇಲ್ಲಿ ವಾಸಿಸುತ್ತಿದ್ದೇವೆ. ನೀರು, ವಿದ್ಯುತ್‌ ಸೇರಿದಂತೆ ಸರ್ಕಾರ ನಮಗೆ ಸೌಲಭ್ಯವನ್ನು ಕಲ್ಪಿಸಿದೆ. ಹಕ್ಕುಪತ್ರವನ್ನೂ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರ್ಯಾಯ ಸ್ಥಳ ನೀಡಿದರೆ ಈ ಜಾಗವನ್ನು ತೆರವು ಮಾಡಲು ನಾವು ಸಿದ್ಧರಿದ್ದೇವೆ’ ಎಂದು ಕೆರೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಾರುತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT