ಸೋಮವಾರ, ಆಗಸ್ಟ್ 8, 2022
22 °C

ಗಾಂಜಾ ಜಪ್ತಿ; ಪೆಡ್ಲರ್ ಸೇರಿ ಹಲವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು ಶುಕ್ರವಾರವೂ 17.80 ಕೆ.ಜಿ ಗಾಂಜಾ ಹಾಗೂ 600 ಎಂ.ಎಲ್ ಹ್ಯಾಶಿಶ್ ಸೇರಿ ಹಲವು ಬಗೆಯ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಅಂತರರಾಜ್ಯ ಡ್ರಗ್ಸ್ ಪೆಡ್ಲರ್ ಸೇರಿ ಹಲವರನ್ನು ಬಂಧಿಸಿದ್ದಾರೆ.

ಮೊಬೈಲ್ ಅಂಗಡಿ ಜೊತೆ ಡ್ರಗ್ಸ್ ಮಾರಾಟ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಅಂತರರಾಜ್ಯ ಪೆಡ್ಲರ್ ಸೇರಿ ಮೂವರನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಅರುಣ್ (29), ವಿಜಯನ್ (25) ಹಾಗೂ ಮಾಗಡಿ ಮುಖ್ಯರಸ್ತೆಯ ಮಾಚೋಹಳ್ಳಿಯ ದೀಪನ್ ಅಲಿಯಾಸ್ ಕಾರ್ತಿಕ್ (24) ಬಂಧಿತರು. ಅವರಿಂದ 13.8 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ.

‘ಮೊಬೈಲ್ ದುರಸ್ತಿ ಅಂಗಡಿ ಇಟ್ಟುಕೊಂಡಿದ್ದ ಅರುಣ್, ಕಾರು ಚಾಲಕನಾಗಿರುವ ವಿಜಯನ್ ಜೊತೆ ಸೇರಿ ಹಲವು ವರ್ಷಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಬಸ್ಸಿನಲ್ಲೇ ಗಾಂಜಾ ತರುತ್ತಿದ್ದ ಆರೋಪಿಗಳು, ನಗರದ ಉಪ ಪೆಡ್ಲರ್‌ಗಳ ಮೂಲಕ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ವಿದ್ಯಾಭ್ಯಾಸ ಬಿಟ್ಟು ಮಾರಾಟ; ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದೀಪನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮಾದಕವ್ಯಸನಿ ಆಗಿದ್ದ ದೀಪನ್, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಮಾದಕ ವಸ್ತು ಮಾರುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಆತನಿಂದ 3.4 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಬಿ.ಟೆಕ್ ವಿದ್ಯಾರ್ಥಿ ಬಂಧನ: ಆಂಧ್ರಪ್ರದೇಶದಿಂದ ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಬಿ.ಟೆಕ್ ವಿದ್ಯಾರ್ಥಿ ವಿನಯ್‌ಕುಮಾರ್ ಡೆಸಿಯಾಕೆ (22) ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯ ವಿನಯ್‌ಕುಮಾರ್, ತನ್ನೂರಿನ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ. ಬಸ್‌ನಲ್ಲಿ ಗಾಂಜಾವನ್ನು ನಗರಕ್ಕೆ ತಂದು ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದ. ಆತನ ಬಳಿ 4.9 ಕೆ.ಜಿ ಗಾಂಜಾ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.

ಹ್ಯಾಶಿಶ್ ಜಪ್ತಿ; ಜಾಲಹಳ್ಳಿಯ ಕಾಲೇಜೊಂದರ ಬಳಿ ಹ್ಯಾಶಿಶ್ ಮಾರಾಟ ಮಾಡುತ್ತಿದ್ದ ಆರೋಪದಡಿ ತವನೀಶ್ ಅಲಿಯಾಸ್ ಈಶ (35) ಎಂಬಾತನನ್ನು ಬಂಧಿಸಲಾಗಿದೆ.

‘ಸ್ಥಳೀಯ ನಿವಾಸಿಯಾದ ತವನೀಶ್, ಹೊರ ರಾಜ್ಯದಿಂದ ಹ್ಯಾಶಿಶ್ ತಂದು ನಗರದಲ್ಲಿ ಮಾರುತ್ತಿದ್ದ. ಆತನಿಂದ 600 ಗ್ರಾಂ ಹ್ಯಾಶಿಶ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಆಫ್ರಿಕಾ ಪ್ರಜೆ ಸೇರಿ ಇಬ್ಬರ ಬಂಧನ; ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಎಂಡಿಎಂಎ ಮಾತ್ರೆ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ.

ಆಫ್ರಿಕಾದ ಜಾನ್ ಎರ್ರಿಕ್ ಅಸ್ರಿನ್ (25) ಹಾಗೂ ಹೆಣ್ಣೂರಿನ ಬೊವಾಸ್ ಶಾಜೀ (27) ಬಂಧಿತರು. ಅವರಿಂದ ₹2 ಲಕ್ಷ ಮೌಲ್ಯದ 70 ಗ್ರಾಂ ತೂಕದ ಎಂಡಿಎಂಎ ಜಪ್ತಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು